ತುಮಕೂರು:
ಸೇವೆಯೇ ಜೀವನವನ್ನಾಗಿಸಿಕೊಂಡಿರುವ ನಾನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ದಿನದ 24 ಗಂಟೆ ವಾರದ ಏಳು ದಿನಗಳ ಕಾಲ ಜನರ ಸೇವೆಗೆ ಸದಾ ಸಿದ್ಧನಾಗಿಯೇ ಬಂದಿದ್ದೇನೆ. ಸೇವೆಯೇ ನನ್ನ ಜೀವನ ಎಂದು ಮಾಜಿ ಶಾಸಕ ಸುರೇಶಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಕುಣಿಗಲ್ ರಸ್ತೆಯ ಬಾಣಾವರ ಗೇಟಿನಲ್ಲಿ ಇಂದು ಜನಸಂಪರ್ಕ ಕಾರ್ಯಾಲಯಕ್ಕೆ ಅಡಿಗಲ್ಲು ಹಾಕುವ ಮುಖೇನ ಭೂಮಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಬಿ.ಸುರೇಶ್ ಗೌಡ ಮಾತನಾಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ನಿತ್ಯ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾನು ಇಲ್ಲಿನ ಜನತೆಗೆ ಯುವಕರಿಗೆ ಏನಾದರೂ ಉತ್ತಮ ಕಾರ್ಯ ಮಾಡಬೇಕೆಂಬ ಮಹದಾಕಾಂಕ್ಷೆಯೊಂದಿಗೆ ಕ್ಷೇತ್ರದ ಜನರ ಬದುಕು ಅಕ್ಷಯವಾಗಲಿ ಎಂಬ ನಿಟ್ಟಿನಲ್ಲಿ ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ದಿನ ಜನತೆಗೆ ಉತ್ತಮ ಸೇವೆ ನೀಡುವ ಸಲುವಾಗಿ ಸಂಕಲ್ಪ ಮಾಡಿ ಎಲ್ಲರಿಗೂ ಪ್ರೇರಣಾದಾಯಕವಾಗಿರುವ ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿದರು. ಕ್ಷೇತ್ರದ ಜನ ಯಾವುದೇ ಸಮಸ್ಯೆ ತಂದರೂ ಅದನ್ನು ಬಗೆಹರಿಸುವಂತ ಕಚೇರಿ ಇದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದರು. ಸುರೇಶ ಗೌಡರು ಯಾವುದೇ ಕೆಲಸವನ್ನು ಮಾಡಿದರು ಅತ್ಯಂತ ಶ್ರದ್ದೆ ನಿಷ್ಠೆಯಿಂದ ಮಾಡುತ್ತಾರೆ ಕಳೆದ ಬಾರಿ ಚುನಾವಣೆಯಲ್ಲಿ ಅವರ ಸೋಲು ನಮ್ಮೆಲ್ಲರ ಸೋಲಾಗಿದೆ. ಬರುವಂತ ಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಾಗಿ ಶಿಸ್ತುಬದ್ಧವಾಗಿ ಕೆಲಸ ನಿರ್ವಹಿಸಿ ಸುರೇಶಗೌಡರ ಗೆಲುವಿಗೆ ಶ್ರಮಿಸುವಂತೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗೂಳೂರು ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಗ್ರಾಮಾಂತರ ಕ್ಷೇತ್ರದ ಅನ್ಯ ಪಕ್ಷದ ವೈಯಕ್ತಿಕ ಕಾರ್ಯಾಲಯಗಳಲ್ಲಿ ಯುವಕರು ಕೆಡುವಂತಹ ಎಲ್ಲ ವ್ಯವಸ್ಥೆ ಇದೆ ಎಂದು ಅನೇಕ ದೂರುಗಳು ಪ್ರತಿನಿತ್ಯ ನಮ್ಮ ಗಮನಕ್ಕೆ ಬರುತ್ತಿವೆ. ಆದರೆ ಇಲ್ಲಿ ನಿರ್ಮಾಣವಾಗುತ್ತಿರುವ ಕಾರ್ಯಾಲಯದಲ್ಲಿ ಯಾವುದೇ ಮೋಜು-ಮಸ್ತಿ ಇರುವುದಿಲ್ಲ ಇಲ್ಲಿ ಸೇವೆಯೇ ನಮ್ಮ ಮೊದಲ ಆದ್ಯತೆ ಇದೊಂದು ಸೇವಾ ನಿರತ ನಮ್ಮೆಲ್ಲರ ಶಕ್ತಿಕೇಂದ್ರ ಇದಾಗಲಿದೆ ಎಂದು ಯುವ ಮುಖಂಡ ಸಿದ್ದೇಗೌಡ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಆಓ ಶಂಕರ್, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಮುಖಂಡ ವೈ.ಎಚ್ ಹುಚ್ಚಯ್ಯ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಘುನಾಥಪ್ಪ, ಹೊಳಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)