ತುಮಕೂರು:
ರಾಜಕಾರಣವೇ ಬೇಡ ಎಂದುಕೊಂಡಿದ್ದ ನನಗೆ, ಅಭಿಮಾನಿಗಳು ಮತ್ತು ಗ್ರಾಮಾಂತರ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ಸಕ್ರಿಯ ರಾಜಕಾರಣಕ್ಕೆ ಮರಳುತಿದ್ದು, ಕ್ಷೇತ್ರದ ಮತದಾರರ ಬಳಿ ಬಂದಾಗ, ಒರ್ವ ರಾಜಕಾರಣಿಯಾಗಿ ನೋಡದೆ, ನಿಮ್ಮ ಕ್ಷೇತ್ರದ ಮನೆ ಮಗನಂತೆ ಕಂಡು, ಸಹಕಾರ ನೀಡಿ ಎಂದು ಮಾಜಿ ಶಾಸಕ ಹೆಚ್.ನಿಂಗಪ್ಪ ಮನವಿ ಮಾಡಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಸಮೀಪದ ಬಸವಣ್ಣನ ಗುಡಿಯ ಬಳಿ ತುಮಕೂರು ಗ್ರಾಮಾಂತರ ಜನತೆ ಹಾಗೂ ಸ್ವಾಭಿಮಾನಿ ಹೆಚ್.ನಿಂಗಪ್ಪ ಅಭಿಮಾನಿ ಬಳಗದವತಿಯಿಂದ ಆಯೋಜಿಸಿದ್ದ ಜಗಜ್ಯೋತಿ ಶ್ರೀಗುರು ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಮತದಾರ ರನ್ನು ಘನತೆಯಿಂದ ನಡೆಸಿಕೊಂಡಿದ್ದೇನೆ.ಮನೆ ಬಾಗಿಲಿಗೆ ಬಂದವರನ್ನು ಅನಾವಶ್ಯಕವಾಗಿ ಕಾಯಿಸಿಲ್ಲ.ಅಲ್ಲದೆ ನಾನು ಕ್ಷೇತ್ರದ ವರು, ಎಲ್ಲಿಂದಲೋ ವಲಸೆ ಬಂದವನಲ್ಲ. ಇದನ್ನು ಕ್ಷೇತ್ರದ ಪ್ರತಿಯೊಬ್ಬ ಮತದಾರರು ಅರ್ಥ ಮಾಡಿಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದವನು ನಾನು.ನಾನು ಅಧ್ಯಕ್ಷನಾಗಿದ್ದ ಕಾಲದಲ್ಲಿ 13 ಕ್ಷೇತ್ರಗಳಲ್ಲಿ 9ರಲ್ಲಿ ಜೆಡಿಎಸ್ ಪಕ್ಷದ ಶಾಸಕರು ಆಯ್ಕೆಯಾಗುವಂತೆ ಹಗಲಿರುಳು ಶ್ರಮಿಸಿದ್ದೇನೆ.ಆದರೆ ಎಲ್ಲಿಂದಲೋ ಬಂದವರಿಗೆ ಮಣೆ ಹಾಕಿ,ನನ್ನನ್ನು ಸೈಡ್‍ಲೈನ್ ಮಾಡಿದ್ದರಿಂದ ಬೇಸರಗೊಂಡು ಕೆ.ಜೆ.ಪಿ.ಸೇರಿದೆ.ಆಗಲು ಕ್ಷೇತ್ರದ ಜನತೆ 25 ಸಾವಿರ ಮತಗಳನ್ನು ನೀಡಿದ್ದೀರಿ. ಆದರೆ ಕೆ.ಜೆ.ಪಿ ಬಿಜೆಪಿ ಒಂದಾದಾಗ,ಬಿಜೆಪಿಗೆ ಹೋಗಲು ಮನಸ್ಸಿಲ್ಲದೆ ತಟಸ್ಥನಾಗಿಯೇ ಉಳಿದೆ ಎಂದರು.
2018ರ ಚುನಾವಣೆಯಲ್ಲಿ ಹಿತೈಷಿಗಳ ವಿರೋಧದ ನಡುವೆಯೂ ಗೌರಿಶಂಕರ್ ಗೆಲುವಿಗೆ ಪ್ರಾಮಾಣಿಕವಾಗಿ ದುಡಿದೆ.ಆದರೆ ಆ ನಂತರ ನನ್ನನ್ನು ಮೂಲೆಗುಂಪು ಮಾಡಲಾಯಿತು.ಇದು ಬೇಸರ ತರಿಸಿ, ರಾಜಕಾರಣವೇ ಬೇಡ ಎಂದಿದ್ದ ನನಗೆ ಕ್ಷೇತ್ರದ ಜನತೆಗೆ ಮತ್ತೊಮ್ಮೆ ಸಕ್ರಿಯ ರಾಜಕಾರಣಕ್ಕೆ ಮರಳುವಂತೆ ಒತ್ತಾಯಿಸಿದ ಹಿನ್ನೇಲೆಯಲ್ಲಿ ಬಸವಣ್ಣನ ಗುಡಿಯಲ್ಲಿ ಪೂಜೆ ಸಲ್ಲಿಸಿ,ಮತ್ತೊಮ್ಮೆ ರಾಜಕಾರಣದ ಪ್ರವಾಸ ಆರಂಭಿಸಿದ್ದೇನೆ ಎಂದು ಹೆಚ್.ನಿಂಗಪ್ಪ ನುಡಿದರು.
ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಬಹುತೇಕ ನೀರಾವರಿ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಗಳು 2006ರಲ್ಲಿ ನಾನು ಶಾಸಕನಾಗಿದ್ದಾಗ ಮಂಜೂರು ಮಾಡಿಸಿದ ಕಾಮಗಾರಿಗಳಾಗಿವೆ.ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆ ಫಲಪ್ರದವಾಗಿಲ್ಲ.ಹಾಗೆಯೇ ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಕಾಮಗಾರಿಯೂ ಪರಿಪೂರ್ಣವಾಗಿಲ್ಲ.ಇನ್ನೂ ಹಲವಾರು ಕೆಲಸಗಳು ಬಾಕಿ ಇವೆ. ಇವುಗಳನ್ನು ಪೂರ್ಣಗೊಳಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ.ಬಸವ ಜಯಂತಿ ದಿನ ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮಗಳ ಅಶೀರ್ವಾದ ನಮ್ಮ ಮೇಲಿರಲಿ ಎಂದು ಹೆಚ್.ನಿಂಗಪ್ಪ ಮನವಿ ಮಾಡಿದರು.
ಕಿರುತೆರೆ ಹಾಗೂ ಚಲನಚಿತ್ರ ನಟ ಹನುಮಂತೇಗೌಡ ಮಾತನಾಡಿ, ಬುದ್ದನ ನಂತರ ವಿಶ್ವಕ್ಕೆ ಮಾರ್ಗದರ್ಶನ ನೀಡಿದ ದಾರ್ಶಾನಿಕರಲ್ಲಿ ಬಸವಣ್ಣ ಪ್ರಮುಖರು. ಸಮಾನತೆಯ ಸಮಾಜ ಕಟ್ಟಲು ಹೋರಾಟ ನಡೆಸಿದವರಲ್ಲಿ ಬಸವಣ್ಣ ಮೊದಲಿಗರು, ನನಗೂ ಈ ಕ್ಷೇತ್ರಕ್ಕೂ 25 ವರ್ಷಗಳ ನಂಟು,2003ರಲ್ಲಿ ಹೆಬ್ಬೂರು-ಗೂಳೂರು ಏತನೀರಾವರಿಗಾಗಿ ಪಾದಯಾತ್ರೆಯನ್ನು ಇಲ್ಲಿಂದಲೇ ಆರಂಭಿಸಲಾಗಿತ್ತು.ಕ್ಷೇತ್ರದ ಜನತೆ ಕ್ಷಣಿಕ ಅಮಿಷಗಳನ್ನು ಬದಿಗಿರಿಸಿದರೆ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯ.ಯಾರ ಉದ್ದಾರ ಮತ್ತೊಬ್ಬರಿಂದ ಸಾಧ್ಯವಿಲ್ಲ.ಮನುಷ್ಯನನ್ನು ಘನತೆಯಿಂದ ನೋಡುವಂತಹ ಜನನಾಯಕನ ಅಗತ್ಯ ಈ ಕ್ಷೇತ್ರಕ್ಕೆ ಇದೆ.ಸರಳರು,ಸಜ್ಜನರು ಆದ ಹೆಚ್.ನಿಂಗಪ್ಪ ಸೂಕ್ತ ವ್ಯಕ್ತಿ ಹಾಗಾಗಿ ಜನತೆ ಅವರಿಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಅಧ್ಯಕ್ಷ ಸಿ.ಗಂಗರಾಜು ಮಾತನಾಡಿ,12ನೇ ಶತಮಾನದಲ್ಲಿ ಜಗಜ್ಯೊತಿ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪವನ್ನು ಆ ನಂತರ ಮುಂದುವರೆಸಿಕೊಂಡು ಬಂದವರು ಪುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಹಾಗೂ ಕ್ಷೇತ್ರದಲ್ಲಿ ಶಾಂತಿ ನೆಲೆಸಬೇಕಾದರೆ ಹೆಚ್.ನಿಂಗಪ್ಪನಂತಹ ಸಜ್ಜನರು ಶಾಸಕರಾಗಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಸಹಕಾರ ನೀಡಬೇಕೆಂದರು.
ಜೆಡಿಎಸ್ ಮುಖಂಡ ಗೂಳೂರು ರಾಮಣ್ಣ ಮಾತನಾಡಿ,ಕೆ.ಜೆ.ಪಿ ನಂತರ ತಟಸ್ಥರಾಗಿದ್ದ ಹೆಚ್.ನಿಂಗಪ್ಪ ಅವರನ್ನು ಜೆಡಿಎಸ್‍ಗೆ ಕರೆತಂದು ತಪ್ಪು ಮಾಡಿದೇವು ಎಂದು ಎನಿಸುತ್ತಿದೆ.ಆದರೂ ಕಾಲ ಮಿಂಚಿಲ್ಲ.ಮತ್ತೊಮ್ಮೆ ದೇವೇಗೌಡರ ಬಳಿ ಮಾತನಾಡಲು ಸಿದ್ದರಿದ್ದೇವೆ.ಯಾವುದೇ ನಿರ್ಧಾರ ಪ್ರಕಟಿಸುವ ಮುನ್ನ ಮತ್ತೊಮ್ಮೆ ಆಲೋಚಿಸಲಿ ಎಂದು ಸಲಹೆ ನೀಡಿದರು.
ಎಪಿಎಂಸಿ ಮಾಜಿ ಸದಸ್ಯರಾದ ಗೋವಿಂದಪ್ಪ ಮಾತನಾಡಿ,ಹೆಚ್.ನಿಂಗಪ್ಪ 30 ವರ್ಷಗಳಿಂದ ಈ ಕ್ಷೇತ್ರದ ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ.ಕ್ಷೇತ್ರದ ಜನರ ನರನಾಡಿಗಳಲ್ಲಿ ಬೇರೆತು ಹೋಗಿದ್ದಾರೆ.ಹಾಗಾಗಿ ಅವರು ಮತ್ತೊಮ್ಮೆ ಶಾಸಕರಾದರೆ ಕ್ಷೇತ್ರದ ಘನತೆ ಹೆಚ್ಚಲಿದೆ ಎಂದರು.
ಈ ವೇಳೆ ಮುಖಂಡರಾದ ರಾಮೇನಹಳ್ಳಿ ಚಿಕ್ಕಸ್ವಾಮಿ,ಸಿದ್ದಗಂಗಪ್ಪ,ಪಾಪಣ್ಣ,ಕುಮಾರಣ್ಣ,ಮಹದೇವ್,ಬಾಬಣ್ಣ, ನಾರಾಯಣ್, ಗಿರೀಶ್,ಕೃಷ್ಣಪ್ಪ,ಬೋರೇಗೌಡ,ವೇಣುಗೋಪಾಲ್‍ಗಂಗಾಟ್ಕಾರ್,ರಘುಕುಮಾರ್,ವೆಂಕಟೇಶ್,ಮಾರುತಿ.ಕೆ.ಆರ್,ಗರಗದಕುಪ್ಪೆ ಅಂಜನಪ್ಪ, ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.
(Visited 10 times, 1 visits today)