ತುಮಕೂರು :
ಕೋವಿಡ್-19 ಪರಿಣಾಮದಿಂದ ಕಳೆದ 2 ವರ್ಷದಿಂದ ನಿರ್ದಿಷ್ಟವಾದ ರೀತಿಯಲ್ಲಿ ತರಗತಿಗಳ ನಡೆಯದೆ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಆದರೆ ಸದ್ಯದ ಸುಧಾರಿತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ವೇಗ ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನರ್ಜಿ ಕ್ಲಬ್ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಎಸ್ಎಸ್ಐಟಿ ಕ್ಯಾಂಪಸ್ನಲ್ಲಿ ಏರ್ಪಡಿಸಿದ್ದ ‘ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕೇಬಲ್ ಅಳವಡಿಕೆ’ ವಿಷಯ ಕುರಿತ ತಾಂತ್ರಿಕ ಸಮ್ಮೇಳನವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನವದೆಹಲಿಯ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಧನಸಹಾಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಎನರ್ಜಿ ಕ್ಲಬ್ ಮೂಲಕ ನಡೆಯುತ್ತಿರುವ ಸಾಮಾಜಿಕ ಚಟುವಟಿಕೆಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶೈಕ್ಷಣಿಕ ಮತ್ತು ಸಂಶೋಧನಾತ್ಮಕ ಚಟುವಟಿಕೆಗಳ ಕಡೆ ಗಮನಹರಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಡಾ.ಎಂ.ಎಸ್.ರವಿಪ್ರಕಾಶ್ ಹೇಳಿದರು.
ಕೋವಿಡ್ 19 ತೊಂದರೆಯಿಂದಾಗಿ ಭೌತಿಕ ತರಗತಿಗಳು ಮತ್ತು ಪ್ರಯೋಗಾಲಯಗಳ ನಿರ್ದಿಷ್ಠವಾಗಿ ಮತ್ತು ವೇಗವಾಗಿ ಆಗುತ್ತಿರಲಿಲ್ಲ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸೂಚ್ಯವಾಗಿ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಎಚ್ಚರಿಸಿದರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಪಿಆರ್ಡಿಸಿ ಕಂಪನಿಯ ಗೌರವ ಸಲಹೆಗಾರರಾದ ಬಿ.ಕೆ. ಶಿವಕುಮಾರ್ ಮಾತನಾಡಿ, ಮುಂದುವರಿದ ಜಗತ್ತಿನ ದೇಶದಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಒಳಸಿಕೊಂಡು ಸಾರ್ವಜನಿಕ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ ತಮಕೂರು ನಗರದಲ್ಲಿ ನಡೆಯುತ್ತಿವ ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳಲ್ಲಿ, ಅದರಲ್ಲೂ ಒಳಚರಂಡಿ ಕಾಮಗಾರಿ ಮಾಡುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಬೇಕು. ಭೂಮಿಯೊಳಗಿನ ಮೂಲಕ ಕೇಬಲ್ ಸಂಪರ್ಕ ಕಲ್ಪಿಸುವ ವೇಳೆ ಸುರಕ್ಷತೆ ಮತ್ತು ಜಾಗ್ರತೆ ವಹಿಸಬೇಕು ಎಂದು ಉದಾಹರಣೆಗಳ ಸಹಿತ ಮಾಹಿತಿ ನೀಡಿದರು.
ಸಿಂಗಾಪುರದಂತಹ ಒಂದು ಚಿಕ್ಕ ದೇಶದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಬಳಕೆಯಿಂದ ಅತ್ಯುತ್ತಮ ಸ್ಮಾರ್ಟ್ ಸಿಟಿಯಾಗಿ ಇಡಿ ಜಗತ್ತಿನ ಗಮನ ಸೆಳೆದಿದೆ. ಅದೇ ರೀತಿ ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿಯೂ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಜಾರಿಗೊಳಿಸಬಹುದು. ಅದಕ್ಕೆ ಬೇಕಾದ ಸಂಪನ್ಮೂಲಗಳು ನಮ್ಮಲ್ಲಿವೆ ಎಂದರು.
ಬೆಂಗಳೂರಿನ ಇಸ್ರೋನ ಯುಆರ್ರಾವ್ ಉಪಗ್ರಹ ಕೇಂದ್ರದ ಸಹ ಯೋಜನಾ ನಿರ್ದೇಶಕ ಹಾಗೂ ವಿಜ್ಞಾನಿ ಗೌರಿಶಂಕರ್ ಸಿ.ಕೆ. ಮಾತನಾಡಿ, ಕೈಗಾರಿಕಾ ವಲಯಕ್ಕೆ ಉದ್ಯೋಗಕ್ಕೆ ಹೋದಾಗ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಡೆಸಿರುವ ಪ್ರಾಯೋಗಿಕ ಯೋಜನಾ ಚಟುವಟಿಕೆಗಳು ಉಪಯೋಗಕ್ಕೆ ಬರುತ್ತವೆ. ಅಂತ ಉತ್ತಮ ವಾತಾವರಣವನ್ನು ‘ಎನರ್ಜಿ ಕ್ಲಬ್’ ವೃತ್ತಿಪರವಾಗಿ ಮಾಡುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತುಂಬಾ ಪ್ರಯೋಜನವಾಗುತ್ತದೆ ಎಂದು ಆಶಿಸಿದರು.
ಸಾಹೆ ವಿಶ್ವವಿದ್ಯಾಲಯ ಕುಲಸಚಿವ ಡಾ.ಎಮ.ಝಡ್. ಕುರಿಯನ್, ಎನರ್ಜಿ ಕ್ಲಬ್ನ ಮಾರ್ಗದರ್ಶಕರರಾದ ಡಾ.ಎಲ್.ಸಂಜೀವಕುಮಾರ್, ಸಂಯೋಜಕರು ಹಾಗೂ ಪ್ರಾಧ್ಯಾಪಕರಾದ ಎನ್.ಪ್ರದೀಪ್, ವಿದ್ಯಾರ್ಥಿ ಸಂಯೋಜಕರಾದ ಶ್ರೀ ಹರ್ಷ ಸಹ ಸಂಯೋಜಕರಾದ ಭರತ್ ಜೆ. ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
(Visited 2 times, 1 visits today)