ತುಮಕೂರು:
ಜನಸಾಮಾನ್ಯರಿಗೆ ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ ನಿವಾರಣೆ ಮಾಡಿಕೊಡಲು ಸರ್ಕಾರ ಉದ್ಯೋಗ ನೀಡಿರುತ್ತದೆ. ಅದರಂತೆ ಕೆಲಸ ಮಾಡಿ ನಿವೃತ್ತರಾಗುತ್ತೇವೆ. ವೃತ್ತಿಯಲ್ಲಿದ್ದಾಗ ಒಂದು ರೀತಿ ನಿವೃತ್ತರಾದ ನಂತರ ಒಂದು ರೀತಿ ಸಮಸ್ಯೆಗಳಿರುತ್ತವೆ. ನಾಯಕತ್ವ ವಹಿಸಿ ಸಂಘಟನಾತ್ಮಕವಾಗಿ ಕೆಲಸ ಮಾಡಿ, ಉತ್ತಮ ಮಾರ್ಗದಲ್ಲಿ ನಡೆದರೆ ಅದಕ್ಕೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಂಘ-ಸಂಘಟನೆಗಳು ಸದಸ್ಯರ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದೇ ಸಂಘದ ಗುರಿಯಾಗಿರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎಲ್. ಭೈರಪ್ಪ ಅಭಿಪ್ರಾಯಪಟ್ಟರು. ಅವರು ಇಂದು ತುಮಕೂರು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘವು ಸಂಘಟಿಸಿದ್ದ ಮಾಸಿಕ ಸಭೆ ಮತ್ತು ಸಂಘದ ಕರಪತ್ರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ನಿವೃತ್ತರ ಬೇಡಿಕೆಗಳ ಈಡೇರಿಕೆಗಾಗಿ 2019 ರಿಂದಲೂ ಸಂಘ ಹೋರಾಟ ಮಾಡುತ್ತ ಬಂದಿದ್ದರೂ ಇನ್ನೂವರೆಗು ನಮ್ಮ ಯಾವ ಬೇಡಿಕೆಯೂ ಈಡೇರಿಲ್ಲ. ಆದರೆ ಮುಖ್ಯಮಂತ್ರಿಗಳೂ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅದರಲ್ಲಿ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ, 80 ವರ್ಷವಾದವರಿಗೆ ನೀಡುವ 20% ಹೆಚ್ಚುವರಿ ಪೆನ್‍ಷನ್‍ನ್ನು 80 ವರ್ಷ ಪೂರ್ಣವಾಗುವವರೆಗೆ ಕಾಯದೇ 80ಕ್ಕೆ ಬಿದ್ದಕೂಡಲೇ ಅದನ್ನು ಮಂಜೂರು ಮಾಡುವುದು ಸೇರಿದೆ. 6ನೇ ವೇತನ ಆಯೋಗದಂತೆ 80 ವರ್ಷದವರು ಕೇವಲ 3.64% ಮಾತ್ರ ಉಪಯೋಗ ಪಡೆಯುವರು. ಇದನ್ನು 70 ವರ್ಷಕ್ಕೆ ಇಳಿಸಿದರೂ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಆದುದರಿಂದ 70 ವರ್ಷಕ್ಕೆ 10%, 75ಕ್ಕೆ 15%, 80 ಕ್ಕೆ 20% ರಂತೆ ಹೆಚ್ಚಿಸಬಹುದಾಗಿದೆ. ಇದನ್ನು 7ನೇ ವೇತನ ಆಯೋಗದ ಸಂದರ್ಭದಲ್ಲಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. 2023ಕ್ಕೆ ಅದು ಜಾರಿಗೆ ಬರಬೇಕು. ಸರ್ಕಾರ ಆ ಬಗ್ಗೆ ಸೂಕ್ತ ರೀತಿಯಲ್ಲಿ ಜಾರಿಗೊಳಿಸುವ ನಂಬಿಕೆ ಇದೆ ಎಂದರು.
ನಿವೃತ್ತರ ಸಂಘ ಪ್ರಾರಂಭವಾಗಿ 65 ವರ್ಷವಾಗಿದ್ದು ಈವರೆಗೂ ಯಾವ ಸುವರ್ಣ ಮಹೋತ್ಸವ ಇತ್ಯಾದಿ ಆಚರಿಸಿರುವುದಿಲ್ಲ. ಹೀಗಾಗಿ ಜೂನ್/ಜುಲೈ ಮಾಹೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಕುರಿತು, ಅದರ ಅಂಗವಾಗಿ ಸ್ಮರಣ ಸಂಚಿಕೆಯೊಂದನ್ನು ಹೊರತರಲಿದ್ದು ಹೆಚ್ಚಿನ ರೀತಿಯಲ್ಲಿ ಜಾಹೀರಾತು ಸಂಗ್ರಹಿಸುವ ಮೂಲಕ ಸಹಕರಿಸಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶ್ರೀನಿವಾಸ್ ಅವರು ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ವಿಭಾಗೀಯ ಸಮಾವೇಶ ಮಾಡಲಿದ್ದು ಎಲ್ಲರೂ ಆಗಮಿಸುವಂತೆ ಆಹ್ವಾನಿಸಿದರು. ಹೆಚ್ಚುವರಿ ಪೆನ್‍ಷನ್‍ನನ್ನು 65 ವರ್ಷದಿಂದಲೇ ನೀಡುವಂತೆ ಒತ್ತಾಯಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗೇಗೌಡರು ಮಾತನಾಡಿ, ನಮ್ಮ ಬೇಡಿಕೆ ಈಡೇರಿಕೆ ಜೊತೆಗೆ ಸಂಘಟನೆಯನ್ನು ಉತ್ತಮಪಡಿಸಿ ಒಗ್ಗಟ್ಟಿನ ಮೂಲಕ ನಮ್ಮ ಅಸ್ತಿತ್ವವನ್ನು ಬಿಂಬಿಸಲು ಅಧ್ಯಕ್ಷರ ಕೈ ಬಲಪಡಿಸಬೇಕಾಗಿದೆ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ತುರುವೇಕೆರೆಯ ಪ್ರಹ್ಲಾದ್ ಅವರು ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಆಹ್ವಾನಿಸಲಿದ್ದು ಹೆಚ್ಚಿನ ಜನಭಾಗವಹಿಸುವ ಮೂಲಕ ಸಂಘಟನಾ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯ ಸಂಘಕ್ಕೆ ಒಂದು ಸುಸಜ್ಜಿತ ಸಭಾಂಗಣವನ್ನೊಳಗೊಂಡ ಕಛೇರಿಯನ್ನು ವ್ಯವಸ್ಥೆಗೊಳಿಸಿಕೊಳ್ಳಬೇಕಾಗಿದೆ. ಅಂತಹ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕೋರಿದರು. ಜಿಲ್ಲಾ ಉಪಾಧ್ಯಕ್ಷರು ಹಾಗೂ ಕುಣಿಗಲ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಚನ್ನರಾಯಪ್ಪ ಅವರು ಮಾತನಾಡಿ, ನಾವು ಎಷ್ಟೇ ಪ್ರಬಲವಾಗಿ ಹೋರಾಟ ಮಾಡಿದರೂ ಮಾಧ್ಯಮದ ಬೆಂಬಲ ಅಂದರೆ ಪ್ರಚಾರ ಸಿಗುತ್ತಿಲ್ಲ. ಸುವರ್ಣ ಮಹೋತ್ಸವ ಆಚರಣೆ ಒಳಗಾಗಿ ಕೆಲವು ಬೇಡಿಕೆಗಳಾದರೂ ಈಡೇರಿದರೆ, ನಿವೃತ್ತರು ತುಂಬು ಸಂತೋಷದಿಂದ ಭಾಗವಹಿಸಬಹುದು ಎಂದು ಅನೇಕರ ಅಭಿಪ್ರಾಯವಾಗಿದೆ ಎಂದರು.
ಜಿಲ್ಲಾ ಸಂಘದ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸುವರ್ಣ ಮಹೋತ್ಸವ ಆಚರಣೆ ಮೂಲಕ ಸರ್ಕಾರಕ್ಕೆ ನಮ್ಮ ಸಂಘಟನಾತ್ಮಕ ನಿಲುವನ್ನು, ಸೌಹಾರ್ಧತೆಯನ್ನು ಸ್ಪಷ್ಟಪಡಿಸಬಹುದು ಆದರೆ ಸರ್ಕಾರ ಅಷ್ಟರ ಒಳಗೆ ಸರ್ಕಾರಕ್ಕೆ ಹೊರೆಯಾಗದಂತಹ ಒಂದೆರಡು ಬೇಡಿಕೆಗಳನ್ನಾದರೂ ಈಡೇರಿಸಬೇಕೆಂದು ಒತ್ತಾಯಿಸಿದರು. ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ದಿವಂಗತ ಮಹದೇವರಾವ್ ಬೋಬಡೆಯವರ ಅಕಾಲಿಕ ನಿಧನವಾಗಿ ಒಂದು ವರ್ಷ ಸಂದಿದೆ. ಅವರ ನೆನಪು ಅವರ ಸಾಧನೆ ಅಮರ ಎಂದು ಸ್ಮರಿಸಲಾಯಿತು.
ಪ್ರಾರಂಭದಲ್ಲಿ ಸುಶೀಲಮ್ಮ ಅವರ ಪ್ರಾರ್ಥನೆಯಾದ ನಂತರ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ ಅವರು ಸ್ವಾಗತಿಸಿದರು. ಹೊಸದಾಗಿ ಸದಸ್ಯರಾದವರನ್ನು ಪುಸ್ತಕ ನೀಡುವ ಮೂಲಕ ಸ್ವಾಗತಿಸಲಾಯಿತು. ಈ ಮಾಹೆ ಜನಿಸಿದ ಹಿರಿಯರಿಗೆ ಶುಭಾಶಯ ಕೋರಲಾಯಿತು. ಕೊನೆಯಲ್ಲಿ ಉಪಾಧ್ಯಕ್ಷರೂ, ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಅನಂತರಾಮಯ್ಯ ಅವರು ಎಲ್ಲರನ್ನೂ ವಂದಿಸಿದರು.

(Visited 7 times, 1 visits today)