ತುಮಕೂರು:
ಇಂದಿನ ಮಕ್ಕಳಿಗೆ ಹೇಮರೆಡ್ಡಿ ಮಲ್ಲಮ್ಮಳ ಆದರ್ಶಗಳನ್ನು ಕಲಿಸುವುದು ಬಹಳ ಮುಖ್ಯವಾಗಿದೆ ಎಂದು ಸಂಸದರಾದ ಜಿ.ಎಸ್. ಬಸವರಾಜು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ರೆಡ್ಡಿ ಜನಸಂಘ(ರಿ) ಇವರ ಸಂಯುಕ್ತಾಶ್ರಯದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮವನ್ನು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಸಮಾಜದಲ್ಲಿ ಕುಟುಂಬಗಳಲ್ಲಿ ಹೊಂದಾಣಿಕೆ ಇಲ್ಲದೆ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಹೆಚ್ಚಾಗಿವೆ. ಹೇಮರೆಡ್ಡಿ ಮಲ್ಲಮ್ಮ ಸಂಪದ್ಭರಿತವಾದ ಸಮಾಜವನ್ನು ಕಟ್ಟಿದವರು. ಇಂದಿನ ಯುವಜನರು ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಜೀವನ ಆದರ್ಶಗಳನ್ನು ತಿಳಿದುಕೊಳ್ಳಬೇಕು ಎಂದರು.
ಕರ್ನಾಟಕದಲ್ಲಿ ಮನೆ ಮಾತಾಗಿರುವ ಶರಣೆಯರಾದ ಅಕ್ಕ ಮಾಹಾದೇವಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಮಹಾಸಾಧ್ವಿಯರಾಗಿದ್ದರು. ಸಮಾಜದಲ್ಲಿ ಬಡತನ, ಕೆಟ್ಟ ಆಲೋಚನೆಗಳನ್ನು ದೂರವಾಗಿಸಿ ದಾನ ಧರ್ಮಗಳನ್ನು ಅಳವಡಿಸಿಕೊಂಡವರು ಎಂದು ತಿಳಿಸಿದರು.
ಕ.ಸಾ.ಪ ಅಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ಇಂದಿನ ಹೆಣ್ಣು ಮಕ್ಕಳು ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶಗಳನ್ನು ಅರಿಯಬೇಕಾಗಿದೆ ಹಾಗೂ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದರು.
ತುಮಕೂರು ವಿ.ವಿ. ಉಪನ್ಯಾಸಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, 12ನೇ ಶತಮಾನದ ಅಕ್ಕ ಮಹಾದೇವಿ ತನ್ನ ಆದರ್ಶಗಳಿಗಾಗಿ ದಿಟ್ಟತನವನ್ನು ತೋರಿಸಿದ ಹಾಗೆ ಹೇಮರೆಡ್ಡಿ ಮಲ್ಲಮ್ಮ ಕೂಡ ಅದೇ ರೀತಿ ಬದುಕಿದ್ದಂತಹವರು. ಹೇಮರೆಡ್ಡಿ ಮಲ್ಲಮ್ಮ ತನ್ನ ಬದುಕನ್ನೇ ಆದರ್ಶವನ್ನಾಗಿರಿಸಿಕೊಂಡು ಸಮಾಜ ಸುಧಾರಣೆಗಾಗಿ ಶ್ರಮಿಸಿದಂತಹ ಸಾಧ್ವಿಯಾಗಿದ್ದರು. ಇವರ ಜೀವನ ಸಾಧನೆಗಳ ಕುರಿತು 3 ಕೃತಿಗಳು, ನಾಟಕಗಳು ಬಂದಿವೆ. ಪುಟ್ಟರಾಜು ಗವಾಯಿ ಬರೆದಿರುವ ಹೇಮರೆಡ್ಡಿ ಮಲ್ಲಮ್ಮ ನಾಟಕ ಸೇರಿದಂತೆ ಹಲವು ನಾಟಕಗಳಿಂದ ಜೀವನ ಸಾಧನೆಗಳನ್ನು ಕಾಣಬಹುದು. ಎಲ್ಲ ಸಮುದಾಯದವರು ಸಹ ಹೇಮರೆಡ್ಡಿ ಮಲ್ಲಮ್ಮನ ಬದುಕಿನ ಅದರ್ಶಗಳಾದ ಸತ್ಯ ಮತ್ತು ಪ್ರಾಮಾಣಿಕತೆ, ಕಾಯಕ ತತ್ಪರತೆ, ದಾನ ಮತ್ತು ದಾಸೋಹ, ಸಹನೆ ಮತ್ತು ಶಾಂತಿ, ನಿಸ್ವಾರ್ಥ ಭಕ್ತಿ, ಕ್ಷಮಾಗುಣ, ಸಮಷ್ಟಿ ಪ್ರಜ್ಞೆ, ಈ ಎಲ್ಲ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮತ್ತು ಮೇಲ್ವಿಕಾರಕ ಸುರೇಶ್, ವಿಶ್ವ ವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ರೆಡ್ಡಿ ಜನಸಂಘ ಅಧ್ಯಕ್ಷ ಕೆ. ಶ್ರೀನಿವಾಸ ರೆಡ್ಡಿ, ಮತ್ತಿತರ ಗಣ್ಯರು ಹಾಜರಿದ್ದರು.
(Visited 8 times, 1 visits today)