ತುಮಕೂರು:
ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಆಲದಮರ ಪಾರ್ಕ್ ನಿರ್ವಹಣೆ ಜವಾಬ್ದಾರಿಯನ್ನು ಪ್ರೆಸ್ ಕ್ಲಬ್‍ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸ್ತಾಂತರಿಸಿದರು.
ನಗರದ ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ ಆಲದಮರದ ಪಾರ್ಕ್‍ನಲ್ಲಿ ಆಲದ ಸಸಿ ನೆಟ್ಟು ನೀರೆರೆಯುವ ಮೂಲಕ ಪ್ರೆಸ್‍ಕ್ಲಬ್ ಕಾರ್ಯ ಚಟುವಟಿಕೆಗೆ ವಿದ್ಯುಕ್ತ ಚಾಲನೆ ನೀಡಿದರು. ಆಲದಮರದ ಪಾರ್ಕ್‍ನಲ್ಲಿ ಸಿದ್ದಗೊಳಿಸಿದ್ದ ವೇದಿಕೆಯಲ್ಲಿ ಪ್ರೆಸ್‍ಕ್ಲಬ್‍ನ ಉಪಾಧ್ಯಕ್ಷರುಗಳಾದ ಶ್ರೀನಿವಾಸರೆಡ್ಡಿ, ಕರುಣಾಕರ್, ಮಾರುತಿ ಗಂಗಹನುಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಯೋಗೀಶ್ ಅವರಿಗೆ ಆಲದ ಮರದ ಪಾರ್ಕ್ ನಿರ್ವಹಣೆ ಹೊಣೆಯನ್ನು ದಾಖಲಾತಿ ಹಸ್ತಾಂತರಿಸುವ ಮೂಲಕ ಮುಖ್ಯಮಂತ್ರಿಗಳು ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ಮಾರ್ಟ್‍ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಆಲದ ಮರದ ಪಾರ್ಕ್‍ನ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೆಸ್‍ಕ್ಲಬ್‍ಗೆ ವಹಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ಪ್ರೆಸ್‍ಕ್ಲಪ್‍ನವರಿಗೆ ಸಾಮಾಜಿಕ ಹೊಣೆಗಾರಿಕೆ, ಪರಿಸರ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಸಾಮಾಜಿಕ ಹೊಣೆಗಾರಿಕೆ ಎಂಬುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳು ಸಹ ಪ್ರಯತ್ನಗಳನ್ನು ನಡೆಸಲಿ ಎಂದು ಅವರು ಹೇಳಿದರು.
ಸರ್ಕಾರದ ಆಯವ್ಯಯದಲ್ಲಿ ಪ್ರಥಮ ಬಾರಿಗೆ ಎಕೋ ಬಜೆಟ್ ಮಾಡಿದ್ದೇವೆ. ಈ ಮೂಲಕ ಪರಿಸರ ಸಂರಕ್ಷಣೆ, ಅರಣ್ಯ, ಸಸ್ಯೋದ್ಯಾನ ವನಗಳನ್ನು ಬೆಳೆಸುವುದಕ್ಕೂ ಒತ್ತು ನೀಡಲಾಗುತ್ತಿದೆ ಎಂದರು. ಪ್ರತಿ ವರ್ಷವೂ ಪರಿಸರವನ್ನು ಗಾಳಿ, ನೀರು, ಭೂಮಿ, ಗಿಡ, ಅರಣ್ಯ ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ಹೋದಾಗ ಮಾತ್ರ ಕರ್ನಾಟಕ ಒಳ್ಳೆಯ ಪರಿಸರ ಯುಕ್ತವಾದ ನಾಡಾಗಲಿದೆ ಎಂದು ಅವರು ತಿಳಿಸಿದರು.
ಮನುಕುಲಕ್ಕೆ ನಿಸರ್ಗ ದೊಡ್ಡ ಕೊಡುಗೆ ನೀಡುತ್ತಿದೆ. ನಾವು ಸಹ ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಚಾಚೂತಪ್ಪದೇ ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ವೈಎ. ನಾರಾಯಣಸ್ವಾಮಿ, ಚಿದಾನಂದಗೌಡ, ಕುಂದರನಹಳ್ಳಿ ರಮೇಶ್ ಹಾಗೂ ಪ್ರೆಸ್‍ಕ್ಲಬ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಜಗನಾಥ್ ಕಾಳೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
(Visited 61 times, 1 visits today)