ತುಮಕೂರು:
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ವೈ.ಹೆಚ್.ಹುಚ್ಚಯ್ಯ ನವರು, ಗ್ರಾಮಾಂತರ ಶಾಸಕರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು,ಈಗಾಗಲೇ ನ್ಯಾಯಾಲಯದಲ್ಲಿರುವ ಸಿವಿಲ್ ಪ್ರಕರಣವೊಂದನ್ನು ನೆಪ ಮಾಡಿಕೊಂಡು ಶಾಸಕರ ತೇಜೋವಧೆಗೆ ಯತ್ನಿಸಿರುವುದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ಬೆಳಗುಂಬ ಗ್ರಾ.ಪಂ.ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ಕೈಗೊಳ್ಳುತ್ತಿರುವ ಅಭಿವೃದ್ದಿ ಕಾರ್ಯಕ್ರಮಗಳಿಂದ ಹತಾಶೆಗೆ ಒಳಗಾಗಿರುವ ಮಾಜಿ ಶಾಸಕರಾದ ಬಿ.ಸುರೇಶಗೌಡರು, ದಲಿತ ಜನಾಂಗಕ್ಕೆ ಸೇರಿದ ವೈ.ಹೆಚ್.ಹುಚ್ಚಯ್ಯ ಅವರನ್ನು ಮುಂದಿಟ್ಟುಕೊಂಡು ಶಾಸಕರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಶಾಸಕರ ಮೇಲೆ ಆರೋಪ ಮಾಡಿರುವ ಜಿ.ಪಂ.ಸದಸ್ಯ ವೈ.ಹೆಚ್.ಹುಚ್ಚಯ್ಯ ಜೆಡಿಎಸ್ ಪಕ್ಷದಲ್ಲಿದ್ದುಕೊಂಡು, ಜಿ.ಪಂ.ಸದಸ್ಯರಾಗಿ,ಜಿ.ಪಂ.ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದವರು,ಕಳೆದ ಜಿ.ಪಂ.ಚುನಾವಣೆ ವೇಳೆ ಟಿಕೇಟ್ ದೊರೆಯು ವುದು ಅನಿಶ್ಚಿತವಾದಾಗ ಬಿಜೆಪಿಗೆ ಹಾರಿ,ಜಿ.ಪಂ.ಸದಸ್ಯರಾಗಿದ್ದಾರೆ.ಉಂಡ ಮನೆಯ ಜಂತಿ ಎಣಿಸುವ ವೈ.ಹೆಚ್.ಹುಚ್ಚಯ್ಯ ನವರ ನಡೆಯನ್ನು ತುಮಕೂರು ತಾಲೂಕು ಘಟಕ ಖಂಡಿಸುತ್ತದೆ.ನಾಜೂಕಯ್ಯ ರೀತಿ ವರ್ತಿಸುವ ಇವರ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇವರ ವಿರುದ್ದ ಪ್ರತಿಭಟಿಸದೆ ವಿಧಿಯಿಲ್ಲ ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಹಾಗೂ ವಕೀಲರಾದ ಗೋವಿಂದರಾಜು ಮಾತನಾಡಿ,ವೈ.ಹೆಚ್.ಹುಚ್ಚಯ್ಯ ಆರೋಪ ಮಾಡಿರುವಂತೆ ಪಾಲಿರಂಗಯ್ಯ ಅವರ ಮಗ ನಾಗರಾಜು ನಮ್ಮ ಪಕ್ಷದ ಅನುಯಾಯಿಯೇ ಹೊರತು ಪಕ್ಷದ ಕಾರ್ಯಕರ್ತರಲ್ಲ.ಯಾವುದೇ ಹುದ್ದೆಗಳಲ್ಲಿ ಕೆಲಸ ಮಾಡುತ್ತಿಲ್ಲ.ಸದರಿ ಜಮೀನಿನ ವಿವಾದ ಈಗಾಗಲೇ ನ್ಯಾಯಾಲಯದಲ್ಲಿದೆ.ತೊಂದರೆಯಾಗಿದೆ ಎಂದು ಹೇಳುವ ಪರಮಶಿವಯ್ಯ ಅವರ ಸಮ್ಮುಖದಲ್ಲಿಯೇ ಸರ್ವೆ ಇಲಾಖೆಯವರು 2016ರಲ್ಲಿ ಹದ್ದುಬಸ್ತು ಮಾಡಿ,ಕಲ್ಲು ಹಾಕಿದ್ದಾರೆ.ಅವರ ಜಮೀನಿನಲ್ಲಿ ಬೀಳುವ ನೀರು ಹೊರ ಹೋಗ ದಂತೆ ಬದು ನಿರ್ಮಿಸಿದ್ದಾರೆ.ಈ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಹುಚ್ಚಯ್ಯ, ಬಾಯಿಗೆ ಬಂದಂತೆ ಮಾತನಾಡಿ, ಉಡಾಫೆ ವರ್ತನೆ ತೋರುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನಮ್ಮ ಶಾಸಕರ ಭಾಗವಹಿಸಿದ್ದ ಕೆಸರಮಡು ಗ್ರಾ.ಪಂ.ನ ಕಾರ್ಯಕ್ರಮದ ಪೋಸ್ಟರ್‍ನಲ್ಲಿ ಆ ಭಾಗದ ಜಿ.ಪಂ.ಸದಸ್ಯರಾದ ವೈ.ಹೆಚ್.ಹುಚ್ಚಯ್ಯ ಅವರ ಹೆಸರು ಮತ್ತು ಪೋಟೋ ಇಲ್ಲದಿರುವ ಬಗ್ಗೆ ಶಾಸಕರೇ ಕಾರ್ಯಕರ್ತರ ಮೇಲೆ ಅಸಮಾಧಾನ ವ್ಯಕ್ತಪಡಿಸಿ, ಇನ್ನು ಮುಂದೆ ಈಗಾಗದಂತೆ ಎಚ್ಚರಿಕೆ ವಹಿಸಲು ಕಾರ್ಯಕರ್ತರಿಗೆ ಸೂಚಿಸಿದ್ದರು.ಆಂತಹ ಪಕ್ಷಾತೀತ ವ್ಯಕ್ತಿಯ ವಿರುದ್ದ ಇಲ್ಲ, ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ತುಮಕೂರು ಗ್ರಾಮಾಂತರ ಕ್ಷೇತ್ರದ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಹರಳೂರು ಸುರೇಶ್,ಗ್ರಾ.ಪಂ.ಸದಸ್ಯ ಗಂಗಾಧರಯ್ಯ, ಗ್ರಾ.ಪಂ.ಮಾಜಿ ಸದಸ್ಯ ಸೀಮಯ್ಯ ಮತ್ತಿತರರು ಉಪಸ್ಥಿತರಿದ್ದರು.