ಕೊರಟಗೆರೆ:
ವಿಧವಾ ಮಹಿಳೆಯೊಬ್ಬರು ವಿಎಸ್‍ಎಸ್‍ಎನ್ ಸೊಸೈಟಿಯಲ್ಲಿ ಇಟ್ಟಿದ್ದ ಭದ್ರತಾ ಠೇವಣಿಯನ್ನು ಆ ಮಹಿಳೆಗೆ ಕೊಡಿಸುವಂತೆ ಮಹಿಳಾ ಮೂಲಭೂತ ಹಕ್ಕುಗಳ ಸಂರಕ್ಷಣಾ ಸಮಿತಿಯ ತಾಲ್ಲೂಕು ಅಧ್ಯಕ್ಷೆ ಜಿ.ನಾಗಲಕ್ಷ್ಮಿ ಅವರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ತಾಲ್ಲೂಕಿನ ವಡ್ಡಗೆರೆ ಗಾಮದ ಪದ್ಮಲತಾ ಎಂಬುವವರು ವಿಎಸ್‍ಎಸ್‍ಎನ್ ಸೊಸೈಟಿಯಲ್ಲಿ 2015 ಆಗಸ್ಟ್ 29 ರಂದು 60,000 (ಅರವತ್ತು ಸಾವಿರ) ರೂ.ಗಳನ್ನು ಭದ್ರತಾ ಠೇವಣಿ ಇಟ್ಟಿದ್ದು, ಇದರ ಕಾಲಾವಧಿ ಏಳು ವರ್ಷಗಳು ಇದ್ದು ಈಗ ಬಡ್ಡಿ ಸೇರಿ 1,20,000 (ಒಂದು ಲಕ್ಷ ಇಪ್ಪತ್ತು ಸಾವಿರ) ರೂ.ಗಳು ನೀಡಬೇಕಾಗಿದೆ. ಪದ್ಮಲತಾ ಒಬ್ಬಂಟಿ ಮಹಿಳೆಯಾಗಿದ್ದು, ತುರ್ತಾಗಿ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ. ಆದರೆ ವಿಎಸ್‍ಎಸ್‍ಎನ್ ಸೊಸೈಟಿಯಲ್ಲಿ ಇಟ್ಟಿದ್ದ ಬಾಂಡ್ ಮೆಚ್ಯೂರಿಟಿ ಆಗಿದ್ದು, ಕಾರ್ಯನಿರ್ವಹಣಾಧಿಕಾರಿ ಬೋರೇಗೌಡ ಎಂಬುವವರು ನಮ್ಮ ಬಳಿ ಹಣದ ಕೊರತೆ ಇದೆ. ಆಡಿಟ್ ಆಗಬೇಕು, ಕೇಂದ್ರ ಕಚೇರಿಯಿಂದ ಅನುದಾನ ಬರಬೇಕು ಎಂಬ ಸಬೂಬು ಹೇಳಿ ಆ ಮಹಿಳೆಗೆ ಹಣ ನೀಡದೆ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಮಹಿಳಾ ಮೂಲಭೂತ ಹಕ್ಕುಗಳ ಸಂರಕ್ಷಣಾ ಸಮಿತಿಯ ತಾಲ್ಲೂಕು ಅಧ್ಯಕ್ಷೆ ನಾಗಲಕ್ಷ್ಮಿ ಆರೋಪಿಸಿದ್ದಾರೆ.
ನಮ್ಮ ಸಮಿತಿಗೆ ಆ ಮಹಿಳೆ ಮನವಿ ಸಲ್ಲಿಸಿದ್ದರ ಮೇರೆಗೆ ಕಳೆದ ಮಾರ್ಚ್ 10 ರಂದು ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಆ ಮಹಿಳೆಗೆ ಯಾವುದೇ ನ್ಯಾಯ ಸಿಗಲಿಲ್ಲ. ಆದ್ದರಿಂದ ಆ ಮಹಿಳೆಗೆ ನ್ಯಾಯ ಒದಗಿಸಿ ವಡ್ಡಗೆರೆ ವಿಎಸ್‍ಎಸ್‍ಎನ್ ಸೊಸೈಟಿಯಿಂದ ಬರಬೇಕಾಗಿರುವ 1, 20,000 ರೂ. ಮೆಚ್ಯುರಿಟಿ ಹಣ ಹಾಗೂ ವಿಳಂಬವಾದ ದಿನದಿಂದ ಸರ್ಕಾರಿ ಬಡ್ಡಿ ಸಹಿತ ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
ಸದರಿ ವಿಎಸ್‍ಎಸ್‍ಎನ್ ಸೊಸೈಟಿ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಗ್ರಾಹಕರಿಗೆ ವಿನಾಃ ಕಾರಣ ತೊಂದರೆಕೊಡುತ್ತಿರುವ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಬೋರೇಗೌಡರ ವಿರುದ್ಧ ಕರ್ತವ್ಯದಲ್ಲಿನ ನಿರ್ಲಕ್ಷತೆ, ಅಸಡ್ಡೆ, ಬೇಜವಾಬ್ದಾರಿತನ ಕರ್ತವ್ಯದಲ್ಲಿ ನಿಷ್ಠೆ ಇಲ್ಲದಿರುವುದು ಈ ಎಲ್ಲಾ ಅಂಶಗಳನ್ನು ಮನಗಂಡು ಸದರಿ ಅಧಿಕಾರಿಯನ್ನು ಅಮಾನತ್ತುಪಡಿಸಬೇಕೆಂದು ನಾಗಲಕ್ಷ್ಮಿ ಮನವಿ ಮಾಡಿದ್ದಾರೆ.
(Visited 30 times, 1 visits today)