ಚಿಕ್ಕನಾಯಕನಹಳ್ಳಿ:
ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸರ್ಕಾರ ಬೀಜಧನವನ್ನು ಸ್ವಸಹಾಯ ಸಂಘಗಳಿಗೆ ಆರ್ಥಿಕ ಅನುದಾನ ನೀಡಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶುಅಭಿವೃದ್ದಿ ಯೋಜನೆ ಹಾಗೂ ಸಂಜೀವಿನ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಆಂದೋಲನದಡಿ ನಡೆದ ಸ್ವಸಹಾಯ ಸಂಘಗಳಿಗೆ ಆರ್ಥಿಕ ಅನುದಾನದ ಚೆಕ್‍ಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಸಹಾಯ ಸಂಘಗಳ ಚಟುವಟಿಕೆ ಅನುದಾನದ ಹಣವನ್ನು ಬಡ್ಡಿಗೆಬಿಡುವ ಪರಿಪಾಟವಾಗಿದೆ, ಇದರಿಂದ ಮಹಿಳೆಯೇ ಶೋಷಣೆಗೊಳಗಾಗುತ್ತಿದ್ದಾಳೆ, ಆದರೆ ಸರ್ಕಾರ ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಂಭನೆಯಾಗುವ ನಿಟ್ಟಿನಲ್ಲಿ ಮುನ್ನಡೆಯಬೇಕೆಂಬ ಕಾರಣಕ್ಕೆ ಈ ಬೀಜಧನವನ್ನು ಸ್ವ ಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಈ ಅನುದಾನದ ಜೊತೆಗೆ ನಿಮ್ಮ ಅಲ್ಪಮೊತ್ತದ ಬಂಡವಾಳ ತೊಡಗಿಸಿ ಸ್ಥಳೀಯವಾಗಿ ಸಿಗುವ ಕಚ್ಚ ಪದಾರ್ಥಗಳಿಂದ ಸಣ್ಣ,ಪುಟ್ಟ ಉದ್ಯಮಗಳನ್ನು ಮಾಡಿರೆಂದರು. ನಮ್ಮಲ್ಲಿ ಇಂತಹ ಸ್ಥಳೀಯ ಸಂಪನ್ಮೂಲಗಳು ಯಥೇಚ್ಚವಾಗಿದೆ ಆದರೆ ಅದರ ಬಳಕೆಯನ್ನು ನಾವೇ ಮಾಡುತ್ತಿಲ್ಲ, ಈಗಲಾದರೂ ಈ ಬಂಡವಾಳದಿಂದ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಪುಟ್ಟ ಉದ್ಯಮಗಳನ್ನು ಆರಂಭಿಸಿ, ಗ್ರಾಮೀಣ ಭಾಗದಲ್ಲಿ ಇಂತಹ ಉದ್ದಿಮೆ ಬೆಳೆದರೆ ಸರ್ಕಾರ ಮಾರುಕಟ್ಟೆ ಹಾಗೂ ಸಾಗಾಣಿಕೆಗೆ ಒತ್ತುನೀಡಲಿದೆ ಎಂದರು.
ಕೋವಿಡ್ ನಿರ್ವಹಣೆ ಹಾಗೂ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಿ, ಮಡಿದವರಿಗೆ ತಲಾ ಲಕ್ಷರೂ. ಪರಿಹಾರನೀಡಿ, ನೆರೆ ಹಾವಳಿಗೆ ನಲುಗಿದ ಸಂದರ್ಭದಲ್ಲೂ ಮಹಿಳೆಯರ ಸ್ವಾವಲಂಭನೆಗೆ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿರುವ ಸರ್ಕಾರದ ಕಾಳಜಿಯನ್ನು ನೀವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ಮಾತನಾಡಿ ಮಹಿಳೆಯರಿಗೆ ಕೌಶಲ್ಯ ವೃದ್ದಿಗಾಗಿ ತುಮಕೂರಿನಲ್ಲಿ ಒಂದು ಕೇಂದ್ರವನ್ನೆ ತೆರೆಯಲಾಗಿದ್ದರೂ ಇನ್ನೂ ಜಿಲ್ಲೆಯ ಮಹಿಳೆಯರು ಹೆಚ್ಚು ಆಸಕ್ತಿತೋರುತ್ತಿಲ್ಲ, ಇದೇ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದ ಮಹಿಳೆ ದೇಶಿ ಎನ್ನುವ ಬ್ರಾಂಡ್ ನ್ನು ನೊಂದಾಯಿಸಿ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಟ್ಟಿರುವ ಜಿಲ್ಲೆಯ ಮೊತ್ತಮೊದಲ ಮಹಿಳೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ 50 ಸ್ವಸಹಾಯ ಸಂಘಗಳಿಗೆ ತಲಾ ರೂ.1ಲಕ್ಷದ ಅನುದಾನದ ಚೆಕ್‍ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಿ. ತೇಜಸ್ವಿನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್‍ಕುಮಾರ್ ಇದ್ದರು. ಶ್ರೀಧರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಮಹಿಳಾ ಸ್ವಸಾಹಯ ಸಂಘಗಳು ನಡೆಸುತ್ತಿರುವ ಗೃಹಕೈಗಾರಿಕೆಯ ಮಳಿಗೆಗಳಲ್ಲಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಪ್ರದರ್ಶನವನ್ನು ಸಚಿವರು ಉದ್ಘಾಟಿಸಿದರು.
(Visited 4 times, 1 visits today)