ತುಮಕೂರು:
60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಲೂಟಿ ಮಾಡಿ ದೇಶವನ್ನು ಮಾರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಇಂದು ಬೇಲ್ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಕಳ್ಳರ ಸಂಘವಿದ್ಧಂತೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಸುಮಾರು 4 ಲಕ್ಷ ಕೋಟಿ ರೂ.ಹಗರಣ ನಡೆದಿದೆ ಎಂದು ಆರೋಪಿಸಿದರು.
ಕಳೆದ 8 ವರ್ಷಗಳ ಹಿಂದೆ 20 ಸಾವಿರ ಕೋಟಿ ರೂ ಇರುವ ರೈತರ ಬಜೆಟನ್ನು ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರು 1.20 ಲಕ್ಷ ಕೋಟಿ ರೂ.ಗೆ ಏರಿಸಿ ರೈತರ ಪರವಾಗಿ ನಿಂತಿದ್ದಾರೆ. ಮೋದಿಯವರಿಗೆ ರೈತರ ಪರ ವಿಶೇಷ ಕಾಳಜಿಯನ್ನು ಹೊಂದಿರುವಂತಹ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ದೇಶದ ರೈತರ ಬೆನ್ನೆಲೆಬಿಗೆ ನಿಂತಿಲ್ಲ, ಆದರೆ ಮೋದಿ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ ಮೂಲಕ ರೈತರ ಬೆನ್ನಿಗೆ ನಿಂತಿದೆ ಎಂದರು.
ನಾನು ರಾಜ್ಯಾಧ್ಯಕ್ಷನಾಗಿ ಮೂರು ವರ್ಷ ಕಳೆದಿದೆ. ರೈತಮೋರ್ಚಾ ಕೂಡ ಎರಡು ವರ್ಷ ಕಳೆದಿದೆ. ಈ ಹತ್ತಾರು ವರ್ಷಗಳ ಅವಧಿಯಲ್ಲಿ ಅಭೂತಪೂರ್ವ ಸಾಧನೆಯನ್ನು ಬಿಜೆಪಿ ಮಾಡಿದೆ. ಭಾರತವು ಸರ್ವಶ್ರೇಷ್ಟವಾಗಿರುವಂತಹ ನೆಲ, ಇಂತಹ ನೆಲದಲ್ಲಿ ಕೃಷಿ ಸಂಸ್ಕøತಿ ಮತ್ತು ಋಷಿ ಸಂಸ್ಕೃತಿ ಎರಡೂ ಪೂಜನೀಯವಾದುದು ಎಂದರು.
ಕುವೆಂಪು ರೈತರ ಬಗ್ಗೆ ವಿಶಿಷ್ಟ ವಿಭಿನ್ನವಾಗಿ ಹೇಳಿದ್ದಾರೆ. ಕುವೆಂಪು ಅವರ ಹಾಡನ್ನು ರೈತ ಗೀತೆ ಮಾಡಿದ್ದು ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಯಡಿಯೂರಪ್ಪ ನವರು ರೈತರ ಪರ ಹೋರಾಟ ಮಾಡಿದವರು. ಯಡಿಯೂರಪ್ಪ ಅವರನ್ನು ರೈತರ ಮಗ ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.
ರೈತರ ಶಾಪ ಕಾಂಗ್ರೆಸ್ ಗೆ ತಟ್ಟಿದೆ ಇಂದು ಅನೇಕ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಅತಿ ಹೆಚ್ವು ಗೋ ಹತ್ಯೆ ನಡೆದಿದ್ದು ಸಿದ್ದರಾಮಯ್ಯ ಅವರ ಕಾಲದಲ್ಲಿಯೇ. ವೋಟ್ ಬ್ಯಾಂಕ್‍ಗಾಗಿ ಸಿದ್ದರಾಮಯ್ಯ ಗೋ ರಕ್ಷಣೆ ಮಾಡುವ ಬದಲು ಗೋ ಹಂತಕರನ್ನು ರಕ್ಷಣೆ ಮಾಡಿದರು ಎಂದು ಕುಟುಕಿದರು.
ಸಿದ್ಧರಾಮಯ್ಯ ಟಿಪ್ಪು ಜಯಂತಿ ಬಗ್ಗೆ ಯೋಚನೆ ಮಾಡಿ, ಸಮಾಜವನ್ನು ಒಡೆದರು. ಆದರೆ ರೈತರ ಬದುಕು ಹಸನು ಮಾಡುವ ಬಗ್ಗೆ ಯೋಚನೆ ಮಾಡಿಲ್ಲ, ಆರ್‍ಎಸ್‍ಎಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗಿಲ್ಲ, ಸಮಾಜವಾದಿ ಅಂತಾರೆ, ಆದರೆ ಸಮಾಜವಾದಿ ಅಲ್ಲ ನೀವು ಮಜವಾದಿ. ಆರ್‍ಎಸ್‍ಎಸ್ ರಾಜಕಾರಣ ಮಾಡಲ್ಲ. ರಾಷ್ಟ್ರ ನಿರ್ಮಾಣ, ವ್ಯಕ್ತಿ ನಿರ್ಮಾಣ ಮಾಡುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ನೀವು ಡೋಂಗಿ ರಾಜಕಾರಣಿ, ನಿಮ್ಮಿಂದ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತಿದೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ದಲಿತ ಎಂಬ ಕಾರಣಕ್ಕೆ ಡಾ.ಜಿ.ಪರಮೇಶ್ವರನ್ನು ಸಿಎಂ ಮಾಡಲು ಬಿಟ್ಟಿಲ್ಲ, ಡಿ.ಕೆ.ಶಿವಕುಮಾರ್‍ರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದೀರಿ ಈಗಾಗಲೆ ಮತ್ತೇ ಸಿಎಂ ಆಗಲು ಟವೆಲ್ ಹಾಕಿದ್ದೀರಿ. ಸಿದ್ದರಾಮಯ್ಯ ನೀವೆಂದು ಮತ್ತೇ ಸಿಎಂ ಆಗಲ್ಲ. ನಿಮ್ಮ ಹೆಸರು ರಾಮನದ್ದು, ಆದರೆ ನಿಮ್ಮ ಮುಖ, ಮನಸ್ಸು ಚಿಂತನೆಗಳೆಲ್ಲವೂ ರಾವಣದ್ದು ಎಂದು ಲೇವಡಿ ಮಾಡಿದರು.
ಮುಂದಿನ 15 ದಿನಗಳ ಕಾಲ 75 ಗಂಟೆಗಳ ಸಮಯವನ್ನು ಮೀಸಲಿಟ್ಟು, ಪ್ರಧಾನಿ ನರೇಂದ್ರ ಮೋದಿಯವರ ರೈತಪರ ಯೋಜನೆಗಳನ್ನು ಪ್ರತಿ ರೈತನ ಮನೆ ಮನೆಗೆ ತಲುಪಿಸುವ ಕೆಲಸವನ್ನು ರೈತಮೋರ್ಚಾದ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷರಾದ ಈರಣ್ಣ ಕಡಾಡಿ, ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಶಿವಪ್ರಸಾದ್, ಎಸ್.ಗುರುಲಿಂಗನಗೌಡ, ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ಜಿಲ್ಲಾಧ್ಯಕ್ಷ ಆರ್.ಎಸ್.ಶಿವಶಂಕರಬಾಬು, ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ನೇಕ್ ನಂದೀಶ್, ನಗರಾಧ್ಯಕ್ಷ ಜಗದೀಶ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ಸಹ ವಕ್ತಾರ ಜೆ.ಜಗದೀಶ್ ಮುಂತಾದವರು ಭಾಗವಹಿಸಿದ್ದರು.