ತುಮಕೂರು:
ರಾಷ್ಟ್ರಕವಿ ಕುವೆಂಪು ಅವರ ಬರೆದ ನಾಡಗೀತೆಯನ್ನು ತಿರುಚಿ ಅಪಮಾನ ಮಾಡಿದ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಸರಕಾರ ಕೂಡಲೇ ಬಂಧಿಸಬೇಕು ಹಾಗೂ ಆತನ ನೇತೃತ್ವದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ, ತೋಳಿಗೆ ಕಪ್ಪುಪಟ್ಟಿ ಧರಿಸಿ, ರಾಜ್ಯ ಒಕ್ಕಲಿಗರ ಸಂಘ, ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಬಾಲಗಂಗಾಧರನಾಥಸ್ವಾಮೀಜಿ ವೃತ್ತದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಅವರ ನೇತೃತ್ವದಲ್ಲಿ ನೂರಾರು ಒಕ್ಕಲಿಗ ಸಮುದಾಯುದ ಮುಖಂಡರು, ಸಾಹಿತಿಗಳು, ಪ್ರಗತಿಪರರು ಪಾಲ್ಗೊಂಡು ರೋಹಿತ್ ಚರ್ಕತೀರ್ಥ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಇಡೀ ನಾಡೇ ಕುವೆಂಪು ಅವರನ್ನು ರಾಷ್ಟ್ರಕವಿ ಎಂದು ಒಪ್ಪಿಕೊಂಡಿದೆ.ಅವರು ನೀಡಿದ ವಿಶ್ವಮಾನವ ಸಂದೇಶವನ್ನು ಇಡೀ ಪ್ರಪಂಚವೇ ಗೌರವಿಸುತ್ತಿರುವ ಸಂದರ್ಭದಲ್ಲಿ ರೋಹಿತ ಚರ್ಕತೀರ್ಥ ಎಂಬು ವ್ಯಕ್ತಿ, ಕುವೆಂಪು ಬರೆದ ನಾಡಗೀತೆಯನ್ನು 2017ರಲ್ಲಿ ತಿರುಚಿ,ಕೆಟ್ಟ ಅರ್ಥ ಬರುವಂತೆ, ಒಂದು ಪಕ್ಷಕ್ಕೆ, ಸಮುದಾಯಕ್ಕೆ ಸಿಮೀತ ಎಂಬಂತೆ ಬಿಂಬಿಸಿರುವುದು ನಾಚಿಕೇಗೇಡಿನ ಸಂಗತಿ, ಇದನ್ನು ರಾಜ್ಯ ಒಕ್ಕಲಿಗರ ಸಂಘ ಖಂಡಿಸುತ್ತದೆ. ರಾಜ್ಯ ಸರಕಾರ ಕೂಡಲೇ ಈತನನ್ನು ಬಂಧಿಸಿ, ಗಡಿಪಾರು ಮಾಡಬೇಕು ಹಾಗೆಯೇ ಈತನ ನೇತೃತ್ವದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಜಾ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಒಂದು ವೇಳೆ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಜಿಲ್ಲಾ ಒಕ್ಕಲಿಗರ ವಿಧ್ಯಾಭಿವೃದ್ದಿ ಸಂಘದ ಆರ್.ಕಾಮರಾಜು ಮಾತನಾಡಿ, ಕುವೆಂಪು ವಿಶ್ವ ಕವಿ, 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ತಮ್ಮ ಶ್ರೀರಾಮಾಯಣದರ್ಶನಂ ಕೃತಿಯ ಮೂಲಕ ಮೊದಲ ಜ್ಞಾನಪೀಠ ಪ್ರಶಸ್ತಿ ಬರುವಂತೆ ಮಾಡಿದವರು ಕುವೆಂಪು. ಅವರ ಹತ್ತಾರು ಕೃತಿಗಳು ಜಗತ್ತಿನ ಎಲ್ಲಾ ಭಾಷೆಗಳಿಗೆ ತುರ್ಜುಮೆಗೊಂಡಿವೆ. ಇಂತಹ ವ್ಯಕ್ತಿಯನ್ನು ಅರೆಬರೆ ತಿಳುವಳಿಕೆ ಇರುವ ರೋಹಿತ್ ಚರ್ಕತೀರ್ಥ ಎಂಬ ವ್ಯಕ್ತಿ ಅವಹೇಳನ ಮಾಡುವ ಮೂಲಕ ಇಡೀ ಕನ್ನಡ ನಾಡಿಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂಬುದು ನಮ್ಮ ಹೋರಾಟವಾಗಿದೆ ಎಂದರು.