ತುಮಕೂರು:


ರೈತರ ಮಧ್ಯೆ ಸಾಕಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ನಾವ್ಯಾರೂ ಕೂತು ಚರ್ಚೆ ಮಾಡುತ್ತಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ಆಗ ಮಾತ್ರ ಜನಪ್ರತಿನಿಧಿಗಳು ರಾಜಕೀಯವಾಗಿ ಯಶಸ್ವಿಯಾಗಲು ಸಾಧ್ಯ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಯಾವ ಪಕ್ಷದಲ್ಲಿ ರೈತರು ಇಂತಹ ಕೆಲಸ ಆಗಬೇಕು ಎಂದು ಹೇಳಿದಾಗ ಆ ಕೆಲಸ ಪ್ರಾಮಾಣಿಕವಾಗಿ ಆಗುತ್ತದೋ ಅಂತಹ ಪಕ್ಷ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಕ್ಷದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಯಶಸ್ಸಿನ ಮೂಲ. ಇದರೊಂದಿಗೆ ಗ್ರಾಮೀಣರ ಬದುಕು, ಕೃಷಿ ಬದುಕನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ ಸಣ್ಣ ರೈತರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಬೇಕು. ಈ ಸಂಬಂಧ ಸರ್ಕಾರಕ್ಕೂ ಆಗಿಂದಾಗ್ಗೆ ಸಲಹೆ ಕೊಡಬೇಕು. ಈ ಮೂಲಕ ರೈತರ ಸಮಸ್ಯೆಯನ್ನು ಒಂದೊಂದೇ ಈಡೇರಿಸಲು ಮುಂದಾದರೆ ಸರ್ಕಾರಕ್ಕೂ ಬಹಳ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಸೋತಾಗ ರೈತರ ಸಮಸ್ಯೆಗಳ ಬಗ್ಗೆ ಎಲ್ಲರೂ ಮಾತನಾಡುತ್ತೇವೆ. ಆದರೆ ಗೆದ್ದಾಗ ಅದನ್ನು ಬಗೆಹರಿಸಲು ಯಾರೂ ಮುಂದಾಗುತ್ತಿಲ್ಲ. ರಾಜಕೀಯವಾಗಿ ಸೃಷ್ಠಿಯಾಗುವ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟ. ಆದರೆ ನೈಜವಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗೋಣ ಎಂದರು.
ಕಂದಾಯ ಇಲಾಖೆ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ರೈತರ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಳ್ಳಬೇಕು. ವಿನಾ ಕಾರಣ ರೈತರನ್ನು ಸಣ್ಣಪುಟ್ಟ ಕೆಲಸಗಳಿಗೆ ತಿಂಗಳುಗಟ್ಟಲೆ ಅಲೆಸುತ್ತಾರೆ. ಇದು ತಪ್ಪಬೇಕು. ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡುವಂತಾಗಬೇಕು ಎಂದರು.
ಸೇನೆಯಲ್ಲಿ ಇರುವ ಎಲ್ಲರೂ ಸಮತೋಲನವಾಗಿ ಕೆಲಸ ಮಾಡಿದರೆ ಮಾತ್ರ ಯುದ್ಧ ಗೆಲ್ಲಬಹುದು. ಹಾಗೆಯೇ ರಾಜಕೀಯದಲ್ಲೂ ಚುನಾವಣೆ ಗೆಲ್ಲಬಹುದು. ಆದರೆ ಆಡಳಿತ ಮಾಡುವುದು ಕಷ್ಟ. ಗೆಲ್ಲುವವರೆಗೆ ಛಲ, ಗುರಿ ಇರುತ್ತದೆ. ಆದರೆ ಗೆದ್ದ ನಂತರ ಶರೀರ ಸುಖ, ವಿಶ್ರಾಂತಿ ಬಯಸುತ್ತದೆ. ದಿನೇ ದಿನೇ ಕಳೆದಂತೆ ನಮ್ಮ ಶಕ್ತಿ, ಜನಪ್ರಿಯತೆ ಕುಗ್ಗುತ್ತಾ ಹೋಗುತ್ತದೆ ಎಂದರು.
ಎಲ್ಲಾ ಶ್ರೇಣಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಸರ್ಕಾರ ಕೊಡ ಮಾಹಿತಿ ಪಕ್ಷಕ್ಕೆ ಹತ್ತಿರವಾಗಿರಬೇಕು, ಬಹಳ ಶ್ರೇಷ್ಠವಾಗಿರಬೇಕು. ಆಗ ಸಂಘಟನೆಗಳಿಗೆ ಬೆಲೆ ಬರುತ್ತದೆ ಎಂದು ಅವರು ಹೇಳಿದರು.
ಪಕ್ಷದ ಸಭೆಗಳಲ್ಲಿ ಚರ್ಚೆ ಮಾಡುವುದನ್ನು ಅಪರಾಧ ಎಂದು ಯಾರೂ ಭಾವಿಸಬಾರದು. ನಾವೆಲ್ಲರೂ ಕುಳಿತು ಚರ್ಚೆ ಮಾಡಬೇಕು. ಅದನ್ನು ಬೀದಿಗೆ ತರಬಾರದು. ಚರ್ಚೆ ಆರೋಗ್ಯಕರವಾಗಿರಬೇಕು. ವಿನಾ ಕಾರಣ ಬೀದಿಗೆ ತಂದು ನಮ್ಮ ಬಟ್ಟೆ ನಾವೇ ಒಗೆದುಕೊಳ್ಳುವಂತೆ ಮಾಡಬಾರದು ಎಂದರು.
ಮೀನುಗಾರಿಕೆ ಇಲಾಖೆಯಿಂದ 50 ಲಕ್ಷದ ವರೆಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಆದರೆ ಬೇರೆ ಬೇರೆ ಕಡೆ ಇರುವವರು ಅರ್ಜಿ ಹಾಕಿ ಇದರ ಪ್ರಯೋಜನ ಪಡೆಯುತ್ತಾರೆ. ನಿಜವಾದ ರೈತರು ಇದರಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆಯೂ ನಾವುಗಳು ಗಮನ ಹರಿಸಿ ನೈಜ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ದೊರೆಯುವಂತೆ ಮಾಡಬೇಕು ಎಂದರು.
ಬೆಳೆ ವಿಮೆ ನೀಡುವಲ್ಲಿ ಇನ್ಸುರೆನ್ಸ್‍ನಲ್ಲಿ ಕಂಪೆನಿ ಮತ್ತು ನಮ್ಮ ಕಡೆಯಿಂದ ದೊಡ್ಡ ತೊಂದರೆಯೇನು ಆಗುವುದಿಲ್ಲ. ಆದರೆ ಬ್ಯಾಂಕ್‍ಗಳಿಂದಲೇ ಸಮಸ್ಯೆಯಾಗುತ್ತಿದೆ. ಒಂದು ವರ್ಷದ ಕಾರ್ಯಕ್ರಮದಲ್ಲಿ ಶೇ. 30 ರಷ್ಟು ಬೆಳೆ ಸಾಲ ಕೊಡಲಾಗುತ್ತಿಲ್ಲ. ಇದಕ್ಕೆ ಪಹಣಿಗಳ ಬೆಳೆ ಕಾಲಂನಲ್ಲಿ ಬೆಳೆ ಬಗ್ಗೆ ನಮೂದು ಆಗೆ ಬರೀ ಸೊನ್ನೆ ಸೊನ್ನೆ ಮುದ್ರಿತವಾಗಿರುವುದೇ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಅಧಿಕಾರಿಗಳು ಕಂಪ್ಯೂಟರ್ ಮೇಲೆ ಹಾಕುತ್ತಾರೆ. ಆದರೆ ಕಂಪ್ಯೂಟರ್‍ಗೆ ಲೋಡ್ ಮಾಡುವವರು ಯಾರು ಎಂಬುದರ ಬಗ್ಗೆ ಅಧಿಕಾರಿಗಳು ಆತ್ಮಾವಲೋಕ ಮಾಡಿಕೊಳ್ಳುವುದೇ ಇಲ್ಲ. ಇದನ್ನೆಲ್ಲ ಗಮನಿಸಿದರೆ ರೈತರದ್ದು ದುರ್ದೈವದ ಬದುಕಾಗಿದೆ ಎಂದರು. ರೈತರನ್ನು ಅನೇಕ ಸಣ್ಣಪುಟ್ಟ ಸಮಸ್ಯೆಗಳು ಬೆನ್ನತ್ತಿ ಕಾಡುತ್ತಿವೆ. ಇದಕ್ಕೆಲ್ಲ ಪರಿಹಾರ ಕಂಡು ಹಿಡಿದು ಮಾರ್ಗದರ್ಶನ ಮಾಡಲು ಸ್ಥಳೀಯವಾಗಿ ಇರುವ ನಮ್ಮ ಕಾರ್ಯಕರ್ತರನ್ನು ಬಳಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಕೃಷಿ ಪ್ರಕೃತಿ, ಗಾಳಿ, ಭೂಮಿ ನಂಬಿಕೊಂಡು ಮಾಡುವ ಬದುಕು. ಹಾಗಾಗಿ ವೈಜ್ಞಾನಿಕ ಸಾಧನೆಗಳು, ಸಂಶೋಧನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅಗತ್ಯವಿದೆ. ಉಪಕಸುಬು ಮಾಡುವ ಬಗ್ಗೆಯೂ ರೈತರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಕೊಡಲಾಗುತ್ತಿದೆ. ಒಟ್ಟು ಜನಸಂಖ್ಯೆಯ ಶೇ. 48 ರಷ್ಟು ಮಹಿಳೆಯರು ಕೃಷಿ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರಾಜಕೀಯವಾಗಿ ಮಹಿಳೆಯರನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದರು. ರಾಜ್ಯದಲ್ಲಿ 65 ಸಾವಿರ ಬೂತ್‍ಗಳ ಸಂಖ್ಯೆಯಿದ್ದು, ಸುಮಾರು ಒಂದೂವರೆ ಲಕ್ಷ ಮಹಿಳೆಯರನ್ನು ಸದಸ್ಯತ್ವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.
ರೈತ ಮೋರ್ಚಾ ಸಂಘಟನೆಗಳಲ್ಲಿ ಖಾಲಿ ಇರುವ ಪದಾಧಿಕಾರಿಗಳ ಹುದ್ದೆಗಳಿಗೆ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು. ಕೃಷಿಯಲ್ಲಿ ಕಿಸಾನ್ ಡ್ರೋನ್‍ಗಳಿಗೆ ಆದ್ಯತೆ, ಡ್ರೋನ್ ತಂತ್ರಜ್ಞಾನದ ಮೂಲಕ ಬೆಳೆಗಳ ಮೌಲ್ಯಮಾಪನ, ಭೂದಾಖಲೆಗಳ ಗಣಕೀಕರಣ, ಬೆಳೆಗಳಿಗೆ ಔಷಧಿ ಸಿಂಪಡಣೆ, ಇದರಿಂದ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಮತ್ತು ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್, ಮತಗಟ್ಟೆ ಮಟ್ಟದಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸುವಂತಹ ಹಾಗೂ ರೈತರ ಬಗ್ಗೆ ಕಾಳಜಿ ಹೊಂದಿರುವಂತಹ ಕಾರ್ಯಕರ್ತರನ್ನು ರೈತ ಪರಿಹಾರಿಗಳಾಗಿ ನೇಮಕ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ನೈಜ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸದಾ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಶಾಸಕ ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯರಾದ ನವೀನ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್, ಬಿ.ಕೆ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

(Visited 4 times, 1 visits today)