ತುಮಕೂರು:
ನಗರದ ಹೊರವಲಯದ ಕ್ಯಾತ್ಸಂದ್ರದ ಮೈದಾಳ ರಸ್ತೆಯ (ಬಸವಾಪಟ್ಟಣ)ಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಿ. ದೇವರಾಜ ಅರಸು ಭವನವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಇಂದು ಲೋಕಾರ್ಪಣೆಗೊಳಿಸಿದರು.
ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಡಿ. ದೇವರಾಜ ಅರಸು ಭವನ ನೂತನ ಕಟ್ಟಡವನ್ನು ಉದ್ಘಾಟಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ದೇವರಾಜ ಅರಸು ಭವನ ಹಿಂದುಳಿದ ವರ್ಗದ ಇಲಾಖೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಭವನವನ್ನು ಇಂದು ಉದ್ಘಾಟನೆ ಮಾಡಿದ್ದೇನೆ ಎಂದರು.
ಬಿಸಿಎಂ ಇಲಾಖೆಯಿಂದ ಹಿಂದುಳಿದ ವರ್ಗದ ಜನರನ್ನು ಮೇಲೆತ್ತುವ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದೆ. ಇಂತಹ ಭವನಗಳನ್ನು ನಿರ್ಮಾಣ ಮಾಡುವ ಮೂಲಕ ಹಿಂದುಳಿದ ವರ್ಗದ ಜನರಿಗೆ ಬೇಕಾಗಿರುವ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಕೆಲಸ ನಡೆಯುತ್ತಿದೆ ಎಂದರು.
ಈ ಭವನದ ಪಕ್ಕದಲ್ಲೇ ಬಿಸಿಎಂ ಹಾಸ್ಟೆಲ್ ಸಹ ಇದೆ. ಇದರಲ್ಲಿ ಹಿಂದುಳಿದ ವರ್ಗದ ಮಕ್ಕಳು, ದಲಿತ ಸಮುದಾಯಕ್ಕೆ ಸೇರಿದ ಮಕ್ಕಳು ಎಲ್ಲರೂ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ಮನುಷ್ಯನ ಜೀವನದಲ್ಲಿ ಶಿಕ್ಷಣ ಬಹಳ ಪ್ರಮುಖವಾಗಿದೆ. ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕೊಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದ ಅವರು, ದೇವರಾಜ ಅರಸು ಭವನ ಹಿಂದುಳಿದ ವರ್ಗದವರನ್ನು ಮೇಲೆತ್ತುವ ಆಶಯವನ್ನು ಸಾಕಾರಗೊಳಿಸಲಿ ಎಂದು ಆಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್, ಮೈದಾಳ ಗ್ರಾ.ಪಂ. ಅಧ್ಯಕ್ಷೆ ಮಾಲಾ ಮಂಜುನಾಥ್, ಉಪಾಧ್ಯಕ್ಷ ಕೆ.ಎಸ್. ನರಸಿಂಹಮೂರ್ತಿ, ಜಿಲ್ಲಾ ಬಿಸಿಎಂ ಅಧಿಕಾರಿ ಎಸ್.ಆರ್. ಗಂಗಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಮ್ಮ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಾದ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
(Visited 3 times, 1 visits today)