ತುಮಕೂರು:
ಜಿಲ್ಲೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡುವ ಪ್ರಮಾಣ ಜಾಸ್ತಿಯಾಗಿದ್ದು, ಇದನ್ನು ತಗ್ಗಿಸುವ ಅಗತ್ಯವಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿಯರಿಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿ, ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದನ್ನು ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತಾಯಿ ಮತ್ತು ಶಿಶುಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರಚಿಸಿ ಕರ್ತವ್ಯವನ್ನು ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 2021 ರಿಂದ 2022ರ ಮಾರ್ಚ್‍ವರೆಗೆ ಒಟ್ಟು 37 ತಾಯಿ ಮರಣ ಹಾಗೂ 23 ಶಿಶು ಮರಣ ಪ್ರಕರಣ ದಾಖಲಾಗಿದ್ದು, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಅಗತ್ಯ ಕ್ರಮವಹಿಸಬೇಕು ಇಲ್ಲವಾದಲ್ಲಿ ತಮ್ಮಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.
ಗರ್ಭಿಣಿ ಮತ್ತು ಶಿಶುಗಳಿಗೆ ನೀಡುವ ಚುಚ್ಚುಮದ್ದು ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಕಾಲ-ಕಾಲಕ್ಕೆ ಅಗತ್ಯವಾದ ಲಸಿಕೆಗಳನ್ನು ನೀಡಬೇಕು. ಯಾವುದೇ ಗರ್ಭಿಣಿ ಮತ್ತು ಶಿಶುಗಳು ಲಸಿಕೆಯಿಂದ ವಂಚಿತರಾಗದಂತೆ ಶೇ.100ರಷ್ಟು ಲಸಿಕೆಯನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಕಾಯಕಲ್ಪ ಪ್ರಶಸ್ತಿಯನ್ನು ಪಡೆಯಲು ಇರುವ ಮಾನದಂಡಗಳ ಬಗ್ಗೆ ವೈದ್ಯರಿಗಾಗಿ ನಡೆಸಿದ ಜಿಲ್ಲಾ ಮಟ್ಟದ ತರಬೇತಿಯಲ್ಲಿ ಉತ್ತಿರ್ಣರಾದ ವೈದ್ಯರನ್ನು ತಾಲ್ಲೂಕು ಆರೋಗ್ಯ ಸಂಸ್ಥೆಗಳ ಮೆಂಟರ್‍ಗಳನ್ನಾಗಿ ನೇಮಿಸಿ ಕಾಯಕಲ್ಪ ಪ್ರಶಸ್ತಿ ಮಾನದಂಡಗಳನ್ನು ಆರೋಗ್ಯ ಸಂಸ್ಥೆಗಳಲ್ಲಿ ಅನುμÁ್ಠನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಿಮಾ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಿಇಓ ವಿದ್ಯಾಕುಮಾರಿ, ಡಿಎಚ್‍ಓ ನಾಗೇಂದ್ರಪ್ಪ ಅವರುಗಳು ಸಹ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಎಂ.ಬಿ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ. ವೀರಭದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಮೋಹನ್ ದಾಸ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಕೇಶವರಾಜ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಹಾಲಿಂಗಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.