ತುಮಕೂರು:
ಹಾಡಹಗಲೇ ಮಹಿಳೆಯರಿಗೆ ಚಾಕು ತೋರಿಸಿ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಳವು ಮಾಡಲು ಸುಪಾರಿ ನೀಡಿದ್ದ ಮಹಿಳೆ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ತೀವ್ರ ಶೋಧಕಾರ್ಯ ನಡೆದಿದೆ. ಅ.12ರಂದು ಇಲ್ಲಿನ ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ನಗರದ ತಮ್ಮ ಮನೆ ಎದುರು ಕುಳಿತಿದ್ದ ವೆಂಕಟಲಕ್ಷ್ಮಿ ಎಂಬುವರು ನೆರೆಮನೆಯ ಸರಸ್ವತಿ ಹಾಗೂ ರೇಖಾ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ್ದ ನಾಲ್ವರು ಅಪರಿಚಿತರು ಮನೆಯೊಳಗೆ ನುಗ್ಗಿ, ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣಗಳನ್ನು ದೋಚಿದ್ದರು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದ ವೆಂಕಟಲಕ್ಷ್ಮಮ್ಮ, ತಮ್ಮ 12 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಸರಸ್ವತಿಯವರ 3 ಗ್ರಾಂ ತೂಕದ ತಾಳಿ ಸರ ಹಾಗೂ ಮೂರು ಮೊಬೈಲ್‌ಗಳನ್ನು ಕಳ್ಳರು ಕಸಿದುಕೊಂಡೊಯ್ದಿರುವುದಾಗಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬೆಂಗಳೂರು ಅಂದ್ರಹಳ್ಳಿ ಮುಖ್ಯರಸ್ತೆ ನಿವಾಸಿ ರವಿ(24), ಬೆಂಗಳೂರು ಅಂಜನಾನಗರ ವಾಸಿ ಡಿ.ಎಸ್.ಅನಿಲ್(22), ಬೆಂಗಳೂರು ತುಂಗಾನಗರ ನಿವಾಸಿ ವಿ.ಸಂತೋಷ್(23), ಕುಣಿಗಲ್ ತಾಲೂಕು ರತ್ನನಗರ ನಿವಾಸಿ ಗಿರೀಶ್(25) ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಆಲದಹಳ್ಳಿ ಮೂಲದ ಬೆಂಗಳೂರು ಉಲ್ಲಾಳ ಮುಖ್ಯರಸ್ತೆ ನಿವಾಸಿ ಕಿರಣ್‌ಕುಮಾರ್(24) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ್ದ ಚಿನ್ನಾಭರಣಗಳು, 3 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.