ತುಮಕೂರು:
ಚುನಾವಣಾ ಪೂರ್ವದಲ್ಲಿ ಹಿಂದುಳಿದ ವರ್ಗಗಳಿಗೆ ಮೊದಲ ಅದ್ಯತೆ ನೀಡುವುದಾಗಿ ಹೇಳಿದ್ದ ತುಮಕೂರು ನಗರ ಶಾಸಕರು, ನಗರದಲ್ಲಿ ನಿರ್ಮಾಣವಾದ ದೇವರಾಜು ಅರಸು ಭವನ ಉದ್ಘಾಟನೆಗೆ ಹಿಂದುಳಿದ ವರ್ಗಗಳ ಮುಖಂಡರಿಗೆ ಕನಿಷ್ಠ ಆಹ್ವಾನವನ್ನು ನೀಡದೆ ಅಪಮಾನ ಮಾಡಿದ್ದಾರೆ. ಇದು ಖಂಡನೀಯ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್ ಆರೋಪಿಸಿದ್ದಾರೆ.
ನಗರದ ಯಾದವ ಹಾಸ್ಟಲ್‍ನಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ವರ್ಗದವರು ನನ್ನನ್ನು ಬೆಂಬಲಿಸಿ, ನಾನು ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡುತ್ತೇನೆ ಎಂದಿದ್ದ ಶಾಸಕರು, ಈಗ ಉಲ್ಟಾ ಹೊಡೆದಿದ್ದಾರೆ ಎಂದರು.
ದೇವರಾಜ ಅರಸು ಎಂಬುದು ಒಂದು ಹೆಸರಲ್ಲ. ಅದು ಹಿಂದುಳಿದ ವರ್ಗಗಳ ಶಕ್ತಿ. ಸಣ್ಣ ಸಣ್ಣ ಶ್ರಮ ಸಂಸ್ಕøತಿಯ ಜಾತಿಗಳನ್ನು ಗುರುತಿಸಿ, ಅವರಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ನಿಮ್ನ ವರ್ಗಗಳಿಗೆ ಅವಕಾಶದ ಭಾಗಿಲುಗಳು ತೆರೆದುಕೊಳ್ಳುವಂತೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣಕರ್ತರಾದರು. ಜೀತಪದ್ದತಿ ರದ್ದು, ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಮೂಲಕ ಸಣ್ಣ ಸಮುದಾಯಗಳು ಒಂದಿಷ್ಟು ಭೂಮಿಯ ಹಕ್ಕು ಪಡೆಯಲು ಸಾಧ್ಯವಾಯಿತು ಎಂದು ಧನಿಯಕುಮಾರ್ ತಿಳಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಟಿ.ಎನ್.ಮಧುಕರ್ ಮಾತನಾಡಿ, ಅವಮಾನಗಳನ್ನೇ ಮೆಟ್ಟಿನಿಂತು,ತನ್ನಂತಹ ದ್ವನಿ ಇಲ್ಲದ ಸಮುದಾಯಗಳಿಗೆ ಹೊಸ ಕಾಯ್ದೆ, ಕಾನೂನುಗಳ ಮೂಲಕ ನ್ಯಾಯ ಒದಗಿಸಿದ ದೇವರಾಜ ಅರಸು ಅವರ ಜಯಂತಿ ಆಚರಣೆ, ಅವರ ತತ್ವ ಸಿದ್ದಾಂತ, ಕಾಳಜಿಯನ್ನು ನಾವೆಲ್ಲರೂ ಅಳವಡಿಸಿಕೊಂಡರೆ ಮಾತ್ರ ಆರ್ಥಪೂರ್ಣವಾಗಲಿದೆ.ನಮ್ಮನ್ನು ಶೋಷಣೆ ಮಾಡುವವರ ಜೊತೆ ಸೇರಿ, ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದೇವೆ.ಅಂದು ಉಳುವವನೇ ಭೂಮಿಯ ಒಡೆಯ ಕಾನೂನಿನ ಅನ್ವಯ ನಮ್ಮ ಆಸ್ಮಿತೆಯನ್ನು ಕಾಣುತ್ತಿದ್ದೇವೆ.ಇದಕ್ಕೆ ದೇವರಾಜ ಅರಸು ಕಾರಣ.ಇಲ್ಲದಿದ್ದಲ್ಲಿ ಸಿಎಎ ಮತ್ತು ಎನ್.ಆರ್.ಸಿಯಂತಹ ಕಾನೂನಿನ ಅಡಿಯಲ್ಲಿ ಗಡಿಪಾರಾಗಬೇಕಾಗುತ್ತಿತ್ತು.ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ, ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ, ಮಕ್ಕಳಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡುವತ್ತ ಹಿಂದುಳಿದ ವರ್ಗಗಳ ಜನರು ಆಲೋಚಿಸಬೇಕಾಗಿದೆ ಎಂದರು.
ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಹಿಂದುಳಿದ ವರ್ಗದವರ ನೋವನ್ನು ಅರ್ಥ ಮಾಡಿಕೊಂಡ ಯಾರಾದರು ನಾಯಕರಿದ್ದರೆ ಅವರೇ ದೇವರಾಜ ಅರಸು ಮಾತ್ರ..ಆದರೆ ತುಮಕೂರು ನಗರ ಶಾಸಕರಾದ ಜೋತಿಗಣೇಶ್, ನಿಮ್ಮನ್ನು ದೇವರಾಜ ಅರಸು ತರಹ ನೋಡುತ್ತೇನೆ ಎಂದು ಭರವಸೆ ನೀಡಿ, ನಂಬಿಸಿ,ಈಗ ತಿರಸ್ಕಾರ ಮಾಡಿದ್ದಾರೆ. ನುಡಿದಂತೆ ನಡೆಯದ ಇವರನ್ನು ಹಿಂದುಳಿದ ವರ್ಗಗಳು ಹೇಗೆ ನಂಬಬೇಕು ಎಂದು ಪ್ರಶ್ನಿಸಿದ ಅವರು,ಇಂದು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಖಾಸಗೀಕರಣ ಅತಿ ವೇಗವಾಗಿ ನಡೆಯುತ್ತಿದ್ದು, ಬಡವರು, ಹಿಂದುಳಿದವರು ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ. ಹಾಗಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಹೆಚ್ಚು ಹಾಸ್ಟಲ್‍ಗಳ ನಿರ್ಮಾಣವಾಗಬೇಕು. ಹಾಗೆಯೇ ನೂತನವಾಗಿ ಸ್ಮಾರ್ಟ್‍ಸಿಟಿಯಿಂದ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ.ಹೊಸ ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಅವರ ಹೆಸರಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಹಾಗೂ ಹಿಂದುಳಿದ ವರ್ಗದ ನಾಯಕ ಮಲ್ಲಸಂದ್ರ ಶಿವಣ್ಣ ಮಾತನಾಡಿ,ದೇವರಾಜ ಅರಸು ನಂತರ ಬಹುತೇಕ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳನ್ನು ಕೇವಲ ಮತ ಬ್ಯಾಂಕಾಗಿ ಪರಿಗಣಿಸುತ್ತಿವೆ. ಅವರ ಸಾಮಾಜಿಕ, ಅರ್ಥಿಕ, ರಾಜಕೀಯ ಅಭಿವೃದ್ದಿಗೆ ಯೋಜನೆಗಳಿಲ್ಲ. ಚುನಾವಣೆ ಟಿಕೇಟ್‍ಗೆ ಜನಪರಕ್ಕಿಂತ ಹಣಬಲಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.ಇದನ್ನು ಕೊನೆಗಾಣಿಸಲು ನಾವೆಲ್ಲರೂ ಅಮಿಷ ರಹಿತ ಮತದಾನಕ್ಕೆ ಮುಂದಾಗಬೇಕಿದೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಹಾಗೂ ತಿಗಳ ಸಮಾಜದ ಮುಖಂಡರ ಪ್ರೆಸ್ ರಾಜಣ್ಣ ಮಾತನಾಡಿ, ಭೂ ಮಾಲೀಕರ ಅಡಿಯಾಳಾಗಿ ದುಡಿಯುತಿದ್ದ ಗೇಣಿದಾರರಿಗೆ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ತಂದು,ಭೂಮಿ ಹಕ್ಕು ಪಡೆಯುವಂತೆ ಮಾಡಿದರು.ಮೈಸೂರು ರಾಜ್ಯಕ್ಕೆ ಬದಲಾಗಿ ಕರ್ನಾಟಕ ಎಂದು ಮರುನಾಮಕರಣ ಮಾಡಿದರು.2016-17ರಲ್ಲಿ ತುಮಕೂರು ನಗರಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಅವರ ಹೆಸರಿಡಲು ನಿರ್ಣಯ ಕೈಗೊಳ್ಳಲಾಗಿದೆ.ಈಗ ಅದನ್ನು ಮತ್ತೆ ಸಭೆಗೆ ಮಂಡಿಸಿ,ಅನುಮೋಧನೆ ಪಡೆದು ಹೆಸರಿಸಬೇಕೆಂಬ ಒತ್ತಾಯ ನಮ್ಮದು ಎಂದರು.
ನಿವೃತ್ತ ಅಧಿಕಾರಿ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ, 1976-77 ರಲ್ಲಿ ಉದ್ಯೋಗದಲ್ಲಿ ಓಬಿಸಿಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗದ ವಿದ್ಯಾವಂತರು ಸರಕಾರಿ ನೌಕರಿ ಪಡೆಯುವಂತೆ ಮಾಡಿದವರು ದೇವರಾಜ ಅರಸು,ಎಂದಿಗೂ ಸ್ವಜಾತಿ, ಸ್ವಕುಟುಂಬಕ್ಕೆ ಅಂಟಿಕೊಂಡವರಲ್ಲ. ಅಡಿದಂತೆ ಮಾಡಿ ತೋರಿಸಿದರು.ಅರಸು ಅವರಲ್ಲಿ ಶೇ10ರಷ್ಟು ಸಾಮಾಜಿಕ ಕಾಳಜಿಯನ್ನು ನಾವೆಲ್ಲರೂ ಮೈಗೂಡಿಸಿಕೊಂಡರೆ ಈ ಆಚರಣೆ ಸಾರ್ಥಕ ಎಂದರು.