ತುಮಕೂರು:
ಕುವೆಂಪು, ಬಸವಣ್ಣ ಅವರನ್ನು ಪಠ್ಯ ಪುಸ್ತಕದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ, ಆದರೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿರುವುದು ಸರಿಯಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಎನ್.ಎಸ್.ಯು.ಐ. ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ 24 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ, ಪ್ರತಿಭಟಿಸಿದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ವಿಡಿಯೋಗಳಿದ್ದರು ಸಹ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆಯೇ ಹಲ್ಲೆ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿ, ಚೆಡ್ಡಿಗೆ ಬೆಂಕಿ ಹಚ್ಚಲು ಹೋದಾಗ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆದರೆ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ರಾಜಕೀಯ ಪ್ರೇರಿತ ದೂರು ದಾಖಲಿಸಿದ್ದಾರೆ, ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ವಿಡಿಯೋವನ್ನು ಎಡಿಟ್ ಮಾಡಿ ಹಲ್ಲೆ ಪ್ರಕರಣದಿಂದ ತಪ್ಪಿಸಿಕೊ ಳ್ಳಲು ಯತ್ನಿಸಿದ್ದು, ಎನ್.ಎಸ್.ಯು.ಐ ïಐಯು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಪ್ರತಿಯೊಬ್ಬರ ಮೇಲೆ ಪ್ರಕರಣ ದಾಖಲಿ ಸಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸುವಂತಹ ತಪ್ಪನ್ನು ಅವರೇನು ಮಾಡಿದ್ದಾರೆ? ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿ, ಜೈಲಿನಲ್ಲಿ ಇರುವಂತೆ ಮಾಡಿದ್ದಾರೆ, ಎನ್‍ಎಸ್‍ಐಯು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವವರನ್ನು ಯಾವುದೇ ಕಾರಣಕ್ಕೂ ಹೊರಗೆ ಇರಬಾರದು, ಕಾಂಗ್ರೆಸ್ ವಕೀಲರ ಘಟಕ, ಯುವ ಕಾಂಗ್ರೆಸ್, ಕಾಂಗ್ರೆಸ್ ಸಂಘಟಿತ ಹೋರಾಟ ಮಾಡಲಿದೆ ಎಂದು ತಿಳಿಸಿದರು.
ಎಂಎಲ್‍ಸಿ ಆರ್.ರಾಜೇಂದ್ರ ಮಾತನಾಡಿ, ದೇಶದಲ್ಲಿ ಇರುವವರೆಲ್ಲರೂ ಚೆಡ್ಡಿ ಹಾಕುತ್ತಾರೆ ಅದೇನು ಬಿಜೆಪಿ ಸ್ವತ್ತಲ್ಲ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ಹಾಕಲಾಗಿದೆ, ಅವರೇನು ಪೆಟ್ರೋಲ್, ಕೆರೋಸಿನ್ ಅನ್ನು ಪ್ರತಿಭಟನೆಯಲ್ಲಿ ಬಳಸಿದ್ದರೆ? ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಂತೆ ಎನ್.ಎಸ್.ಯು.ಐ ಕಾರ್ಯಕರ್ತರಿಂದಲೇ ಚೆಡ್ಡಿ ಸುಡುವ ಅಭಿಯಾನವನ್ನು ಪ್ರಾರಂಭಿಸುವುದಾಗಿ ಹೇಳಿದರು.
ಸಂಸದ ತೇಜಸ್ವಿ ಸೂರ್ಯ ದೆಹಲಿ ಸಿಎಂ ಮನೆ ಗೇಟ್ ಮುರಿದು, ಸಿಸಿಟಿವಿ ಹೊಡೆದು ಹಾಕಿದ್ದರು, ಅವರ ಮೇಲೆ ಯಾವ ಪ್ರಕರಣ ದಾಖಲಾಗಿದೆ, ಅವರಿಗೊಂದು ಕಾನೂನು ನಮಗೊಂದು ಕಾನೂನಾ? ಮಕ್ಕಳ ಮೇಲೆ ಯಾಕಿಂತ ಪ್ರಕರಣ ಹಾಕ ಲಾಗಿದೆ, ದೇಶದಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲವೇ? ಅವರು ಏನು ಹೇಳುತ್ತಾರೋ ಅದನ್ನು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಬಿಜೆಪಿ ಯುವ ಮೋರ್ಚಾ ಮತ್ತು ಇಬ್ಬರು ರೌಡಿ ಶೀಟರ್ ಹಲ್ಲೆ ಮಾಡಿದ್ದಾರೆ, ಪೊಲೀಸರು ಎಬಿವಿಪಿಯ ಕೆಲವರ ಮೇಲೆ ಎಫ್‍ಐಆರ್ ಹಾಕಿ ಕೈ ತೊಳೆದುಕೊಂಡಿದ್ದಾರೆ, ಹಲ್ಲೆ ಮಾಡಿರುವ ಎಲ್ಲರ ಮೇಲೆಯೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಎಂ.ವಿ.ರಾಘವೇಂದ್ರಸ್ವಾಮಿ, ಗ್ರಾ.ಪಂ.ಸದಸ್ಯ ಅಮಲಾಪುರ ದೇವರಾಜು, ಹರಿಪ್ರಸಾದ್, ಮೋಹನ್ ಪರಮೇಶ್, ರಾಜೇಶ್ ದೊಡ್ಮನೆ, ರಾಕೇಶ್, ನಿಖಿಲ್ ರಾಜಣ್ಣ, ನೂರ್ ಹುಸೇನ್, ದೀಪಕ್ ಹೆಚ್.ಎಸ್ ಸೇರಿದಂತೆ ಇತರರಿದ್ದರು.