ತುರುವೇಕೆರೆ:
ತಾಲೂಕಿನ ಜಿ.ಮಂಚೇನಹಳ್ಳಿಯ ಗೊಲ್ಲರಹಟ್ಟಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಲಿಯ ನಿರ್ದೇಶಕ ಎಂ.ಟಿ.ಕೃಷ್ಣಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿ.ಮಂಚೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಹುಪಾಲು ಹಿಂದುಳಿದ ವರ್ಗಗಳ ಜನಾಂಗದ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸಲು ತಾಲೂಕು ಆಡಳಿತ ವಿಫಲವಾಗಿದೆ. ಈ ಸಂಬಂಧಿಸಿದಂತೆ ಹತ್ತಾರು ಬಾರಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದೂರಿದರು.
ಸಾರ್ವಜನಿಕರ ದೇಣಿಗೆಯಲ್ಲಿ ಗೊಲ್ಲರಹಟ್ಟಿಯ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ ದಾರಿಯ ಆರಂಭದಲ್ಲಿರುವ ಜಮೀನಿನ ಮಾಲೀಕರೋರ್ವರು ಇಲ್ಲದ ತಕರಾರು ತೆಗೆದು ರಸ್ತೆಯನ್ನು ಸಂಪೂರ್ಣಗೊಳಿಸಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಜನರು ಓಡಾಡಲು ತೊಂದರೆಯಾಗಿದೆ. ಮಳೆ ಬಂದರೆ ಗೊಲ್ಲರಹಟ್ಟಿಯೊಳಗೆ ಜನರು ಬರುವುದು ಅಸಾಧ್ಯವಾಗಿದೆ. ಅಲ್ಲದೇ ಸದರಿ ವ್ಯಕ್ತಿ ಗ್ರಾಮದಲ್ಲಿರುವ ಬಡವರಿಗೆ ಬೆದರಿಕೆ ಒಡ್ಡಿ ಅವರ ಆಸ್ತಿಗಳನ್ನು ಕಿತ್ತುಕೊಂಡಿದ್ದಾನೆ.
ಹಲವಾರು ಬಡವರ ಜಮೀನನ್ನು ಬೆದರಿಸಿ ಒತ್ತುವರಿ ಸಹ ಮಾಡಿಕೊಂಡಿದ್ದಾನೆ. ರಾಜಕೀಯವಾಗಿ ಪ್ರಭಾವಿಯಾಗಿರುವ ಈತ ಬಡ ಜನರ ಮೇಲೆ ದೌರ್ಜನ್ಯವೆಸಗಿ ಪ್ರಾಣ ಬೆದರಿಕೆಯನ್ನೂ ಸಹ ನೀಡುತ್ತಿದ್ದಾನೆ. ಈ ಸಂಬಂಧ ತಾಲೂಕು ಕಛೇರಿ ಮತ್ತು ದಂಡಿನ ಶಿವರ ಪೋಲಿಸ್ ಠಾಣೆಗೆ ದೂರು ನೀಡಿದರೂ ಸಹ ಅಧಿಕಾರಿಗಳು ಶ್ರೀಮಂತರ ಪರ ವಹಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಗೊಲ್ಲರಹಟ್ಟಿಯ ಅಮಾಯಕ ಜನರು ಪರದಾಡುವಂತಾಗಿದೆ.
ಗ್ರಾಮದಲ್ಲಿ ಪ್ರಭಾವಿಯಾಗಿರುವ ಈತನ ಕಿರುಕುಳದಿಂದಾಗಿ ವಿದ್ಯುತ್ ಕೇಬಲ್ ನ್ನೂ ಸಹ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ತಮ್ಮ ಮನೆಗಳಿಗೆ ಯಾವುದೇ ತುರ್ತು ವಾಹನಗಳು ಸಹ ಬಾರದ ಸ್ಥಿತಿ ಇದೆ. ಸ್ವತಂತ್ರ್ಯ ಬಂದಾಗಿನಿಂದಲೂ ಸಹ ಇಲ್ಲಿಯ ಜನರಿಗೆ ಮೂಲಭೂತ ಸೌಲಭ್ಯವೆಂಬುದು ಮರೀಚಿಕೆಯಾಗಿದೆ ಎಂದು ಕೃಷ್ಣಮೂರ್ತಿ ಹೇಳಿದರು. ಪಾದಯಾತ್ರೆ – ಹಲವಾರು ಬಾರಿ ತಾಲೂಕು ಆಡಳಿತಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದರೂ ಸಹ ಎಲ್ಲ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲಿ ಯಾವುದೇ ಅನಾಹುತವಾದರೂ ಸಹ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜವಾಬ್ದಾರಿ ಹೊರಬೇಕಾಗುತ್ತದೆ. ಕೂಡಲೇ ಹಿಂದುಳಿದ ವರ್ಗಗಳ ಜನಾಂಗ ವಾಸಿಸುತ್ತಿರುವ ಜನರಿಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸೂಕ್ತ ರಸ್ತೆ ನಿರ್ಮಿಸಿಕೊಡಬೇಕು ಮತ್ತು ಅಮಾಯಕರಿಗೆ ತೊಂದರೆ ನೀಡುತ್ತಿರುವ ಗ್ರಾಮದ ಮುಖಂಡನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಜನರಿಗೆ ರಕ್ಷಣೆ ನೀಡಬೇಕೆಂದು ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಈ ಗ್ರಾಮದಲ್ಲಿ ವಯಸ್ಸಾಗಿರುವ ಹಲವಾರು ಮಂದಿ ವಯೋವೃದ್ಧರೂ ಇದ್ದಾರೆ. ಹಲವಾರು ಮಂದಿ ರೋಗಿಗಳೂ ಇದ್ದಾರೆ. ಇವರುಗಳಿಗೆ ಚಿಕಿತ್ಸೆ ಕೊಡಿಸಲೂ ಸಹ ಆಗದ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಕೃಷ್ಣಮೂರ್ತಿ ತಮ್ಮ ಅಸಹಾಯಕ ಸ್ಥಿತಿಯನ್ನು ಮನದಟ್ಟು ಮಾಡಿದ್ದಾರೆ.
ಕೂಡಲೇ ತಾಲೂಕು ಆಡಳಿತ ಎಚ್ಚೆತ್ತು ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮದಲ್ಲಿರುವ ಎಲ್ಲರೊಂದಿಗೆ ತಾಲೂಕು ಆಡಳಿತ ಕಛೇರಿ ಮತ್ತು ಜಿಲಾಧಿಕಾರಿಗಳ ಕಛೇರಿಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಹರಿಸುವುದು ಅನಿವಾರ್ಯವಾಗಲಿದೆ ಎಂದು ತೆಂಗು ಮತ್ತು ನಾರು ಅಭಿವೃದ್ಧಿ ಮಂಡಲಿಯ ನಿರ್ದೇಶಕ ಎಂ.ಟಿ.ಕೃಷ್ಣಮೂರ್ತಿ ಸರ್ಕಾರವನ್ನು ಎಚ್ಚರಿಕೆ ನೀಡಿದ್ದಾರೆ.