ತುಮಕೂರು:
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 2022-23ನೇ ಸಾಲಿನಲ್ಲಿ ನಗರದ 12 ಪಾರ್ಕ್‍ಗಳ ಅಭಿವೃದ್ಧಿಗೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇಲ್ಲಿಯ ಮಾರುತಿನಗರ 3ನೇ ಕ್ರಾಸ್‍ನಲ್ಲಿರುವ ಸಂಜೀವಿನಿ ಉದ್ಯಾನವನದಲ್ಲಿ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಾರ್ಕ್‍ಗಳ ಅಭಿವೃದ್ಧಿಗೆ ನಾಗರೀಕ ಸಮಿತಿಗಳ ಸಹಕಾರ ಅತೀ ಮುಖ್ಯವಾಗಿದೆ ಎಂದರು.
1.74 ಕೋಟಿ ರೂ. ವೆಚ್ಚದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 12 ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೇ ಪಾರ್ಕ್‍ಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಯಾರೂ ಟೆಂಡರ್ ಹಾಕದ ಕಾರಣ, ಟೆಂಡರ್ ವಾಪಸ್ ಹೋಗಿತ್ತು. ಮತ್ತೆ ರೀಟೆಂಡರ್ ಆಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಮಾರುತಿನಗರದ ಸಂಜೀವಿನಿ ಉದ್ಯಾನವನ ದೊಡ್ಡ ಪಾರ್ಕ್ ಆಗಿರುವುದರಿಂದ 22 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಮಾರ್ಟ್‍ಸಿಟಿಯಿಂದ ಸುಮಾರು 30-35 ಕೋಟಿ ರೂ. ಪಾರ್ಕ್‍ಗಳ ಅಭಿವೃದ್ಧಿಗೆ ಸಿಕ್ಕಿದೆ. ಇದರ ಜೊತೆಗೆ ಟೂಡಾದವರೂ ಸಹ ಕೈಜೋಡಿಸಿ ಪಾರ್ಕ್‍ಗಳ ಅಭಿವೃದ್ಧಿಗೆ ಈ ಹಿಂದೆಯೂ 2-3 ಕೋಟಿ ರೂ. ಅನುದಾನ ನೀಡಿದ್ದಾರೆ. ಪ್ರಸ್ತುತ 1.74 ಕೋಟಿ ರೂ. 12 ಪಾರ್ಕ್‍ಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದೆಯೂ ಸಹ ಪಾರ್ಕ್‍ಗಳ ಅಭಿವೃದ್ಧಿಗೆ ಟೂಡಾದವರು ಹೆಚ್ಚಿನ ಅನುದಾನ ವಿನಿಯೋಗಿಸಲಿದ್ದಾರೆ ಎಂದರು.
ನಗರದಲ್ಲಿ ಪಾರ್ಕ್‍ಗಳ ನಿರ್ವಹಣೆಗೆ ನಾಗರೀಕ ಸಮಿತಿಗಳ ಪಾತ್ರ ಹೆಚ್ಚಿನದಾಗಿದೆ. ತುಮಕೂರಿನಲ್ಲಿರುವ ಸುಮಾರು 70-80 ರಷ್ಟು ಪಾರ್ಕ್‍ಗಳು ಅಭಿವೃದ್ಧಿಗೊಂಡಿವೆ. ಜೊತೆಗೆ ಸರ್ಕಾರ ಕೊಟ್ಟಿರುವಂತಹ ಹಣ ಪೋಲಾಗದೇ ಉಳಿದಿದೆ ಎಂದರೆ ಅದಕ್ಕೆ ನಾಗರೀಕ ಸಮಿತಿಗಳೇ ಮುಖ್ಯ ಕಾರಣ ಎಂದು ಹೇಳಿದರು.
ಪಾರ್ಕ್‍ಗಳ ಸಂರಕ್ಷಣೆಗೆ ಟೂಡಾ ಆಯುಕ್ತರಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ನಾಗರೀಕ ಸಮಿತಿಗಳು, ದೊಡ್ಡ ದೊಡ್ಡ ಫ್ಯಾಕ್ಟರಿಗಳು, ದೊಡ್ಡ ದೊಡ್ಡ ಸಂಸ್ಥೆಗಳು ಪಾರ್ಕ್‍ಗಳ ನಿರ್ವಹಣೆಗೆ ಮುಂದೆ ಬಂದರೆ ಅವರಿಗೆ ದತ್ತು ಕೊಡಲಾಗುತ್ತದೆ. ಮಾರುತಿನಗರದ ಸಂಜೀವಿನಿ ಪಾರ್ಕ್ ಅಭಿವೃದ್ಧಿಗೆ ಇಲ್ಲಿನ ಹಿತರಕ್ಷಣಾ ಸಮಿತಿಯೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಸೆಕ್ಟರ್‍ನ ಸಿಎಸ್‍ಆರ್ ಅನುದಾನ ಪಡೆದು ಮತ್ತಷ್ಟು ಅಭಿವೃದ್ಧಿಪಡಿಸಲಿ ಎಂದು ಆಶಿಸಿದರು.
ಟೂಡಾ ಅಧ್ಯಕ್ಷ ಬಿ.ಎಸ್. ನಾಗೇಶ್ ಮಾತನಾಡಿ, ಟೂಡಾ ವತಿಯಿಂದ ನಗರದ ವಿವಿಧ ಕಡೆ ಸುಮಾರು 1.74 ಕೋಟಿ ರೂ.ವೆಚ್ಚದಲ್ಲಿ 12 ಪಾರ್ಕ್‍ಗಳ ಅಭಿವೃದ್ಧಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಗಿದೆ. ನಗರದ ಶಾಸಕರು ಪಾರ್ಕ್‍ಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದು, ನಗರದಲ್ಲಿರುವ ಎಲ್ಲಾ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು.
ನಗರದ ಶೆಟ್ಟಿ ಗ್ರಾಮದ ವಾಕ್‍ಪಾತ್ ಅಭಿವೃದ್ಧಿ ಕಾಮಗಾರಿಗೆ 7.50 ಲಕ್ಷ, ಮಂಜುನಾಥನಗರ ಪಾರ್ಕ್‍ಗೆ ಹೆಚ್ಚುವರಿ ವಾಕ್‍ಪಾತ್ ಮತ್ತು ಬೆಂಚುಗಳನ್ನು ಅಳವಡಿಸುವ ಕಾಮಗಾರಿಗೆ 8.30 ಲಕ್ಷ, ಸರಸ್ವತಿಪುರಂ ಪಾರ್ಕ್‍ಗೆ ಚೈನ್‍ಲಿಂಕ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿಗೆ 8.50 ಲಕ್ಷ, ಮಾರುತಿನಗರ ಸಂಜೀವಿನಿ ಪಾರ್ಕ್ ಅಭಿವೃದ್ಧಿಗೆ 21.90 ಲಕ್ಷ, ಮಹಾಲಕ್ಷ್ಮಿನಗರ 5ನೇ ಕ್ರಾಸ್ 2ನೇ ಮುಖ್ಯರಸ್ತೆಯಲ್ಲಿರುವ ಪಾರ್ಕ್ ಅಭಿವೃದ್ಧಿಗೆ 11 ಲಕ್ಷ, ಶೆಟ್ಟಿಹಳ್ಳಿ ವಾಣಿಜ್ಯ ತೆರಿಗೆ ಕಚೇರಿ ಹಿಂಭಾಗದ (ಜಯನಗರ ಪೂರ್ವ) ಕಾಂಕ್ರೀಟ್ ಚರಂಡಿ ಮತ್ತು ರಸ್ತೆಯ ಅಭಿವೃದ್ಧಿಗೆ 9.40 ಲಕ್ಷ, ಸದಾಶಿವನಗರ ಪಾರ್ಕ್ ಅಭಿವೃದ್ಧಿಗೆ 20.15 ಲಕ್ಷ, ಟೂಡಾ ಕ್ಯಾತ್ಸಂದ್ರ ವಸತಿ ಬಡಾವಣೆಯಲ್ಲಿ ಕೊಳವೆ ಬಾವಿಯನ್ನು ಕೊರೆಯುವುದು, ಪಂಪು ಮೋಟಾರ್ ಮತ್ತು ಪೈಪ್ ಲೇನ್ ಅಳವಡಿಸುವ ಕಾಮಗಾರಿಗೆ 6.70 ಲಕ್ಷ, ಕಸಬಾ ಕುಚ್ಚಂಗಿ ತಿಪ್ಪೂರಮ್ಮ ದೇವಸ್ಥಾನದ ಜೆಲ್ಲಿ ರಸ್ತೆ ಅಭಿವೃದ್ಧಿಗೆ 8.70 ಲಕ್ಷ, ಶೆಟ್ಟಿಹಳ್ಳಿ ಸ್ವತಂತ್ರ ಉದ್ಯಾನವನದ ವಾಕ್‍ಪಾತ್ ಮತ್ತು ಇತರೆ ಕಾಮಗಾರಿ ಅಭಿವೃದ್ಧಿಗೆ 22.30 ಲಕ್ಷ, ಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ 62/3 ಮತ್ತು 4 ರಲ್ಲಿ ನಿರ್ಮಿಸಲಾಗಿರುವ ಸ್ವತಂತ್ರ ಉದ್ಯಾನವನದ ಫ್ರೀಡಮ್ ವಾಲ್ ಹಗೂ ಇತರೆ ಕಾಮಗಾರಿಗೆ 24.70 ಲಕ್ಷ, ಮತ್ತು ಅಮಾನಿಕೆರೆ ಸರ್ವೆ ನಂಬರ್ 245/4 ಮತ್ತು ಇತರೆ ಸರ್ವೆ ನಂಬರ್‍ಗಳಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿರುವ ಸಿ.ಎ.ನಿವೇಶನದಲ್ಲಿ ಹೊರಾಂಗಣ ಟೆನಿಸ್ ಕೋರ್ಟ್ ಅಭಿವೃದ್ಧಿ ಕಾಮಗಾರಿಗೆ 24.95 ಲಕ್ಷ ಸೇರಿ 174.10 ಲಕ್ಷ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಟೂಡಾ ಸದಸ್ಯರಾದ ಜೆ.ಜಗದೀಶ್, ಹನುಮಂತಪ್ಪ, ವೀಣಾ ಶಿವಕುಮಾರ್, ಪ್ರತಾಪ್, ಶಿವಕುಮಾರ್, ಟೂಡಾ ಆಯುಕ್ತ ಯೋಗಾನಂದ್, ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ವಿಷ್ಣುವರ್ಧನ್, ಮುಖಂಡರಾದ ಬಿ.ಬಿ.ಮಹದೇವಯ್ಯ, ರುದ್ರೇಶ್, ಚಂದನ್, ಆಡಿಟರ್ ಚಂದ್ರಶೇಖರ್, ಹರೀಶ್, ಜಗಜ್ಯೋತಿ ಸಿದ್ದರಾಮಣ್ಣ ಸೇರಿದಂತೆ ಮಾರುತಿನಗರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಬಡಾವಣೆಯ ನಾಗರೀಕರು ಭಾಗವಹಿಸಿದ್ದರು.