ತುಮಕೂರು:


ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೂನ್ 16 ಮತ್ತು 17, 2022 ರಂದು ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯು ತುಮಕೂರು ನಗರದ 14, ಶಿರಾ 2 ಮತ್ತು ತಿಪಟೂರಿನ 2 ಪರೀಕ್ಷಾ ಕೇಂದ್ರಗಳಂತೆ ಒಟ್ಟು 18 ಕೇಂದ್ರಗಳಲ್ಲಿ ನಡೆಯಲಿದ್ದು, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಶಿಷ್ಟಾಚಾರವನ್ನು ಕಾಯ್ದುಕೊಂಡು ನಿಯಮಾನುಸಾರ ಪರೀಕ್ಷೆಯನ್ನು ನಡೆಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ವಿಡೀಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಿಇಟಿ ಪರೀಕ್ಷೆಗೆ ಸಂಬಂಧಿಸಿದ ವಿಡೀಯೊ ಕಾನ್ಫರೆನ್ಸ್ ಸಭೆಯ ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಈ ಮೇಲಿನಂತೆ ಸೂಚನೆ ನೀಡಿದರು. ತುಮಕೂರು ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ 6264, ಶಿರಾ ತಾಲ್ಲೂಕಿನ 2 ಪರೀಕ್ಷಾ ಕೇಂದ್ರಗಳಲ್ಲಿ 984 ಮತ್ತು ತಿಪಟೂರು ತಾಲ್ಲೂಕಿನ 2 ಕೇಂದ್ರಗಳಲ್ಲಿ 1488 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ 8736 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬರೆಯಲಿದ್ದು, ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಸಂಪರ್ಕ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಸಿಇಟಿ ಪರೀಕ್ಷೆ ನಡೆಯುವ ತುಮಕೂರು, ಶಿರಾ ಮತ್ತು ತಿಪಟೂರು ನಗರಗಳಲ್ಲಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಜೂನ್ 16 ಮತ್ತು 17ರಂದು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್, ಸೈಬರ್ ಸೆಂಟರ್ ಅಂಗಡಿಗಳನ್ನು ಮುಚ್ಚಿಸುವಂತೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡುವಂತೆ ಪೊಲೀಸ್ ಅಧೀಕ್ಷಕರನ್ನು ಕೋರುವಂತೆ ಮತ್ತು ಪ್ರತಿ ಕೇಂದ್ರಗಳಲ್ಲೂ ಆರೋಗ್ಯ ಕಾರ್ಯಕರ್ತರನ್ನು ಪ್ರಥಮ ಚಿಕಿತ್ಸಾ ಕಿಟ್‍ನೊಂದಿಗೆ ಎರಡು ದಿನಗಳ ಕಾಲ ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರಾದ ಗಂಗಾಧರ್ ಅವರಿಗೆ ಸೂಚಿಸಿದರು.
ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್‍ಒಪಿ) ಪ್ರಕಾರ ಪರೀಕ್ಷಾ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವಂತೆ ಮತ್ತು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗಲು ಉತ್ತಮ ರೀತಿಯ ಗಾಳಿ, ಬೆಳಕು ಹೊಂದಿರುವ ಕೊಠಡಿಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಯಿತು.
ತ್ರಿ ಸದಸ್ಯ ಸಮಿತಿಯನ್ನು ರಚಿಸುವ ಬಗ್ಗೆ, ಮಾರ್ಗಾಧಿಕಾರಿಗಳನ್ನು ನೇಮಿಸುವ ಬಗ್ಗೆ, ಪರೀಕ್ಷಾ ಕೇಂದ್ರಗಳನ್ನು ಬಂಡಲ್ ಮತ್ತು ಲಕೋಟೆಗಳನ್ನು ವಿತರಿಸುವ ಕುರಿತು, ಪರೀಕ್ಷಾ ಕಾರ್ಯಕ್ಕೆ ವಾಹನಗಳನ್ನು ನಿಯೋಜಿಸುವ ಕುರಿತು, ವೀಕ್ಷಕರ ನೇಮಕಾತಿ, ಬಂದೋಬಸ್ತ್ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

(Visited 1 times, 1 visits today)