ತುಮಕೂರು:
ನಗರದ ಸಪ್ತಗಿರಿ ಬಡಾವಣೆಯ ರಾಘವೇಂದ್ರ ನಗರದ ಟಿ.ಪಿ.ಕೈಲಾಸಂ ರಸ್ತೆಯಲ್ಲಿ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಕಚೇರಿಯನ್ನು ಉದ್ಘಾಟಿಸಲಾಯಿತು.
ಭಾರತಾಂಭೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಕಚೇರಿಯನ್ನು ಅಧಿಕೃತವಾಗಿ ಚಾಲನೆಗೆ ದೊರೆಯಿತು.
ರಾಷ್ಟ್ರೀಯ ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ ಮಾತನಾಡಿ, ನಮ್ಮ ಪಡೆಯನ್ನು ಕಟ್ಟಿರುವ ಪ್ರಮುಖ ಉದ್ದೇಶವೆಂದರೆ, ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆಯ ಜೊತೆಗೆ, ಭ್ರಷ್ಟಾಚಾರವನ್ನು ಕಿತ್ತೊಗೆಯುವುದು. ಗೋಶಾಲೆಗಳ ನಿರ್ವಹಣೆ ಮತ್ತು ಗೋವು ಹಾಗೂ ಅದರ ಸಂತತಿ ರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಮಾಡಿ, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಮಾಡುವುದು, ಕೃಷಿ ಮತ್ತು ಅದಕ್ಕೆ ಪೂರಕ ಕ್ಷೇತ್ರಗಳನ್ನು ಬಲಿಷ್ಠಗೊಳಿಸುವುದು, ಪರಿಸರದ ಆಪಾಯಕಾರಿ ತ್ಯಾಜ್ಯಗಳಿಂದಾಗುತ್ತಿರುವ ದುಷ್ಪರಿಣಾಮವನ್ನು ಕಡಿಮೆ ಮಾಡುವುದು. ಪ್ರಾಣಿಗಳ ಹಕ್ಕು ಸಂರಕ್ಷಣೆ, ಗ್ರಾಮೀಣ ಮತ್ತು ನಗರಗಳ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವುದು. ಯುವ ಜನರ ಸಬಲೀಕರಣಕ್ಕೆ ಒತ್ತು ನೀಡುವುದು, ವಿಜ್ಞಾನ ಮತ್ತು ತಂತ್ರಜ್ಞಾನದ,ಮಾಹಿತಿ ಸಂವಹನ ಕ್ಷೇತ್ರದಲ್ಲಿ ಯುವಜನರನ್ನು ಹೆಚ್ಚು ಹೆಚ್ಚಾಗಿ ತೊಡಗುವಂತೆ ಮಾಡುವುದು. ಮತಾಂತರವನ್ನು ತಡೆಗಟ್ಟುವುದು ಹಾಗೂ ಧಾರ್ಮಿಕ ಕ್ಷೇತ್ರದ ಬಗ್ಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಲಾಗುವುದು. ಹಾಗಾಗಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷ ಜಿ.ಎಸ್.ಬಸವರಾಜು ಮಾತನಾಡಿ, ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ರಚನೆಗೊಂಡಿದೆ. ಸಮಾಜದಲ್ಲಿರುವ ಭ್ರಷ್ಟಾಚಾರ, ಭೂ ಕಬಳಿಕೆ, ಮಾನವ ಹಕ್ಕುಗಳ ಉಲ್ಲಂಘನೆ, ಪರಿಸರ ಸಂರಕ್ಷಣೆ ಮತ್ತಿತರ ಮಹತ್ವದ ಉದ್ದೇಶಗಳೊಂದಿಗೆ ಆರಂಭಿಸಲಾಗಿದೆ. ಭವಿಷ್ಯದಲ್ಲಿ ಇದನ್ನು ರಾಷ್ಟ್ರ ಮಟ್ಟಕ್ಕೆ ಬೆಳೆಸುವ ಉದ್ದೇಶ ಹೊಂದಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದರು.
ಈ ವೇಳೆ ಕೈಗಾರಿಕೋದ್ಯಮಿ ಹೆಚ್.ಜಿ.ಚಂದ್ರಶೇಖರ್, ಕೋರಿಮಂಜುನಾಥ್, ಪಾಲಿಕೆ ಸದಸ್ಯ ವಿಷ್ಣುವರ್ಧನ್, ಯೋಗಗುರು ನಾಗರಾಜರಾವ್, ಗೋವಿಂದರಾವ್, ಜಿ.ಕೆ.ಶ್ರೀನಿವಾಸ್, ಜಿ.ಕೆ.ವಾಸವಿಗುಪ್ತ, ಮನೋಹರ್ ಎಸ್., ಬಿ.ಆರ್.ವಿಜಯ ಕುಮಾರ್, ಸಂದೀಪ್.ಕೆ, ಮತ್ತಿತರರು ಭಾಗವಹಿಸಿದ್ದರು.