ತುಮಕೂರು
ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ, ದಬ್ಬಾಳಿಕೆ-ಕಿರುಕುಳ ಖಂಡಿಸಿ, ಬಗರ್ ಹುಕಂ ಸಾಗುವಳಿದಾರರ ಹಕ್ಕು ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಛೇರಿ ಎದುರು ಜೂನ್ 14 ರಿಂದ ರೈತರ ಬೃಹತ್ ಅನಿರ್ದಿಷ್ಟ ಧರಣಿ ನಡೆಯಲಿದೆ.
ದೌರ್ಜನ್ಯ, ದಬ್ಬಾಳಿಕೆ ಬಳಸಿ ಅರಣ್ಯ ಇಲಾಖೆ ಮೂಲಕ ಕಿತ್ತುಕೊಂಡಿರುವ ಬಗರ್ ಹುಕಂ ಸಾಗುವಳಿ ಭೂಮಿ ಮರಳಿಸಲು ,ಎಲ್ಲಾ ಬಗರ್ ಹುಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ,ಸಾಗುವಳಿ ಮಂಜೂರಾತಿ ಆದೇಶ ಪಡೆದಿರುವ ಎಲ್ಲಾ ಬಗರ್ ಹುಕಂ ರೈತರಿಗೆ ದುರಸ್ತು ಮಾಡಿ ಪಹಣಿ ವಿತರಿಸಲು, ಬಗರ್ ಹುಕಂ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಅವಕಾಶವನ್ನು ವಿಳಂಬ ಮಾಡದೇ ಕಲ್ಪಿಸಲು ,ವಸತಿ ರಹಿತರಿಗೆ ಮನೆ-ನಿವೇಶನಕ್ಕಾಗಿ ಸರ್ಕಾರಿ ಭೂಮಿ ಲಭ್ಯ ಇಲ್ಲದ ಕಡೆ ಭೂ ಸ್ವಾಧೀನದ ಮೂಲಕ ಮನೆ -ನಿವೇಶನ ಒದಗಿಸಲು ,ವಿವಿಧ ಯೋಜನೆಗಳಿಗೆ ಭೂ ಸ್ವಾಧೀನಕ್ಕೆ ಒಳಗಾದ ಬಗರ್ ಹುಕಂ ಸಾಗುವಳಿದಾರರು ಸೇರಿದಂತೆ ಎಲ್ಲಾ ರೈತರಿಗೆ ಪರಿಹಾರದ ಹಣ ನೀಡಲು ಆಗ್ರಹಿಸಿ ಜೂನ್ 14 ರಿಂದ ತುಮಕೂರು ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆಯ ಎಲ್ಲಾ ಹತ್ತು ತಾಲ್ಲೂಕುಗಳಿಂದ ನೂರಾರು ರೈತರು ಈ ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ.ಅಂದು ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ನಿಂದ ಮೆರವಣಿಗೆ ಮೂಲಕ ಬಂದು ಧರಣಿ ಕುಳಿತುಕೊಳ್ಳಲಾಗುವುದು.
ಕೋವಿಡ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಅರಣ್ಯ ಇಲಾಖೆಯವರು ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗಂಗಯ್ಯನ ಪಾಳ್ಯ ,ಅಮ್ಮನಘಟ್ಟ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಹಲವಾರು ಕಡೆ ರೈತರನ್ನು ಬಲಾತ್ಕಾರವಾಗಿ ಒಕ್ಕಲೆಬ್ಬಿಸಿದ್ದಾರೆ.ಹತ್ತಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ ನೂರಾರು ತೆಂಗು, ಮಾವು ಮುಂತಾದ ಲಕ್ಷಾಂತರ ರೂ ಬೆಲೆ ಬಾಳುವ ಮರಗಳು ಹಾಗೂ ಬೆಳೆಗಳನ್ನು ನಾಶ ಪಡಿಸಿದ್ದಾರೆ. ಈ ಸಂದರ್ಭದ ಆಕ್ರಂದನ , ನೋವುಗಳು ಮಾಧ್ಯಮದಲ್ಲಿ ಬಂದಾಗ ಮೊಸಳೆ ಕಣ್ಣೀರು ಸುರಿಸುವ ಸರ್ಕಾರಗಳು ಸ್ವಲ್ಪ ದಿನದ ನಂತರ ಮತ್ತೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗುತ್ತಿದ್ದಾರೆ .ಇದಕ್ಕೆ ಕೊನೆ ಯಾವಾಗ ಎಂದು ಈ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಪ್ರಶ್ನಿಸಲಾಗುವುದು.
ಜಿಲ್ಲೆಯ ಸಾವಿರಾರು ರೈತರು, ಕೃಷಿ ಕೂಲಿಕಾರರು ,ದಲಿತರು 40-50 ವರ್ಷಗಳಿಂದ ಬಗರ್ ಹುಕಂ ಸಾಗುವಳಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಸಾಗುವಳಿ ಸಕ್ರಮ ಚೀಟಿಗಳು ಇರುವ ರೈತರನ್ನು ಸಹ ಒಕ್ಕಲೆಬ್ಬಿಸುವ ಆಕ್ರಮಣಗಳಿಗೆ ಗುರಿ ಮಾಡಲಾಗಿದೆ. ಪಾರಂ 50,53,57 ರಲ್ಲಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರನ್ನು ಕಾನೂನು ಬಾಹಿರ ವಾಗಿ ಒಕ್ಕಲೆಬ್ಬಿಸಲಾಗಿದೆ. ತಮ್ಮ ಹತ್ತಿರ ಇರುವ ಕಂದಾಯ ದಾಖಲಾತಿಗಳನ್ನು ತೋರಿದರೂ ಅರಣ್ಯ ಇಲಾಖೆಯ ದೌರ್ಜನ್ಯ ದ ಅಹಂಕಾರ ತಣಿಯುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಅಪಾದಿಸುತ್ತದೆ.
ಕೋವಿಡ್ ಪೂರ್ವದಲ್ಲಿ ಅರಣ್ಯ ಇಲಾಖೆ ಕಿರುಕುಳದ ವಿರುದ್ಧ, ರೈತರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಸರ್ಕಾರ ಕೂಡಲೇ ಸಕ್ರಮ ಮಾಡಬೇಕೆಂದು, ಅರಣ್ಯ ಇಲಾಖೆಯು ದಲಿತರು, ಬಡವರಿಂದ ಬಲಾತ್ಕಾರವಾಗಿ ಕಿತ್ತುಕೊಂಡಿರುವ ಕೃಷಿ ಭೂಮಿಯನ್ನು ವಾಪಸ್ಸು ನೀಡಬೇಕೆಂದು ಗುಬ್ಬಿ ತಾಲೂಕಿನ ಗಂಗಯ್ಯನ ಪಾಳ್ಯದಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಪೆಬ್ರವರಿ 25-28 ,2020 ರಲ್ಲಿ ಪಾದಯಾತ್ರೆ ನಡೆಸಿದ್ದರು. ಈ ಹೋರಾಟದ ಫಲವಾಗಿ ಅವತ್ತಿನ ಉಸ್ತುವಾರಿ ಸಚಿವ ಶ್ರೀ ಜೆಸಿ ಮಾಧು ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ರೈತರ ಸಭೆ ನಡೆದು ರೈತರ ಮತ್ತು ಅರಣ್ಯ ಇಲಾಖೆಯ ನಡುವೆ ವಿವಾದ ಇರುವ ಕೃಷಿ ಭೂಮಿಗಳ ಸರ್ವೆ ನಡೆಸಬೇಕು. ಎಲ್ಲಾ ಬಗರ್ ಹುಕಂ ಭೂಮಿಗಳ ಸಕ್ರಮದ ಪ್ರಕ್ರಿಯೆ ಯನ್ನು ವೇಗಗೊಳಿಸಬೇಕೆಂದು ತೀರ್ಮಾನ ಮಾಡಿ ಸರ್ವೆ ವರದಿಗಳು ಬಂದ ನಂತರ ಮತ್ತೊಂದು ಸಭೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ವೆ ನಡೆಸಲಿಲ್ಲ. ಈಗಲೂ ಅರಣ್ಯ ಇಲಾಖೆಯ ತಕರಾರುಗಳಿಂದ ಬಗರ್ ಹುಕಂ ಸಾಗುವಳಿ ಸಕ್ರಮವಾಗುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕಟುವಾಗಿ ಟೀಕಿಸುತ್ತದೆ.
ಈಗ ಮತ್ತೇ ಮುಂಗಾರು ಶುರುವಾಗುತ್ತಿರುವ ಹಿನ್ನಲೆಯಲ್ಲಿ ಭೂಮಿಯನ್ನು ಪಡೆದುಕೊಳ್ಳುವ ಹೋರಾಟವನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ಪ್ರಾಂತ ರೈತ ಸಂಘ ನಿರ್ಧರಿಸಿ ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಜಿಲ್ಲಾ ಮಟ್ಟದ ಭೂ ಸಮಾವೇಶವನ್ನು ಮೇ 10,2022 ರಂದು ಸಂಘಟಿಸಿತ್ತು. ಈ ಸಮಾವೇಶದ ಕರೆಯ ಮೇರೆಗೆ ಜೂನ್ 14,2022 ರಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ದಿμÁ್ಟವಧಿ ಬೃಹತ್ ಧರಣಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಾಗುವಳಿ ಸ್ವಾಧೀನದ ಹಕ್ಕನ್ನು ಖಾತರಿ ಪಡಿಸಿಕೊಳ್ಳಲು, ಮರು ಸ್ವಾಧೀನಕ್ಕೆ ಇರುವ ಅಡ್ಡಿಯನ್ನು ನಿವಾರಿಸಿಕೊಳ್ಳಲು ಈ ಬೃಹತ್ ಧರಣಿ ಯಲ್ಲಿ ಜಿಲ್ಲೆಯ ಎಲ್ಲಾ ಬಗರ್ ಹುಕಂ ಸಾಗುವಳಿದಾರರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಗರ್ ಹುಕಂ ಸಾಗುವಳಿದಾರರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ತುಮಕೂರು ಜಿಲ್ಲಾ ಸಮಿತಿ ಮನವಿ ಮಾಡುತ್ತದೆ.