ತುಮಕೂರು:
ದೌರ್ಜನ್ಯ, ದಬ್ಬಾಳಿಕೆ ಬಳಸಿ ಅರಣ್ಯ ಇಲಾಖೆ ಮೂಲಕ ಕಿತ್ತುಕೊಂಡಿರುವ ಬಗರ್ ಹುಕಂ ಸಾಗುವಳಿ ಭೂಮಿ ಮರಳಿಸಲು ಹಾಗೂ ಎಲ್ಲಾ ಬಗರ್ ಹುಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರಾಂತ ರೈತ ಸಂಘ ನಗರದ ಜಿಲ್ಲಾಧಿಕಾರಿ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದೆ.
ಸಾಗುವಳಿ ಮಂಜೂರಾತಿ ಆದೇಶ ಪಡೆದಿರುವ ಎಲ್ಲಾ ಬಗರ್ ಹುಕಂ ರೈತರಿಗೆ ದುರಸ್ತು ಮಾಡಿ ಪಹಣಿ ವಿತರಿಸಬೇಕು. ಬಗರ್ ಹುಕಂ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಅವಕಾಶವನ್ನು ವಿಳಂಬ ಮಾಡದೇ ಕಲ್ಪಿಸಬೇಕು. ವಸತಿ ರಹಿತರಿಗೆ ಮನೆ-ನಿವೇಶನಕ್ಕಾಗಿ ಸರ್ಕಾರಿ ಭೂಮಿ ಲಭ್ಯ ಇಲ್ಲದ ಕಡೆ ಭೂ ಸ್ವಾಧೀನದ ಮೂಲಕ ಮನೆ-ನಿವೇಶನ ಒದಗಿಸಬೇಕು. ವಿವಿಧ ಯೋಜನೆಗಳಿಗೆ ಭೂ ಸ್ವಾಧೀನಕ್ಕೆ ಒಳಗಾದ ಬಗರ್ ಹುಕುಂ ಸಾಗುವಳಿದಾರರು ಸೇರಿದಂತೆ ಎಲ್ಲಾ ರೈತರಿಗೆ ಪರಿಹಾರದ ಹಣ ನೀಡುವಂತೆ ಒತ್ತಾಯಿಸಿ ಅನಿರ್ಧಿಷ್ಟ ಧರಣಿ ನಡೆಸಲಾಗುತ್ತಿದೆ.
ಪ್ರತಿಭಟನಾ ಧರಣಿಗೆ ಚಾಲನೆ ನೀಡಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಮಾತನಾಡಿ, ಕೋವಿಡ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಅರಣ್ಯ ಇಲಾಖೆಯವರು ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗಂಗಯ್ಯನ ಪಾಳ್ಯ, ಅಮ್ಮನಘಟ್ಟ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಹಲವಾರು ಕಡೆ ರೈತರನ್ನು ಬಲಾತ್ಕಾರವಾಗಿ ಒಕ್ಕಲೆಬ್ಬಿಸಿದ್ದಾರೆ. ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ನೂರಾರು ತೆಂಗು, ಮಾವು ಮುಂತಾದ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳು ಹಾಗೂ ಬೆಳೆಗಳನ್ನು ನಾಶಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಬೆನ್ನೆಲಬು ರೈತ ಎಂದು ಭಾಷಣಗಳಲ್ಲಿ ಹೇಳುವ ಸರ್ಕಾರದ ಮಂತ್ರಿಗಳು, ಶಾಸಕರು ಭೂಮಿ ಕಿತ್ತುಕೊಳ್ಳುವ ಅರಣ್ಯ ಇಲಾಖೆಯನ್ನು ಹದ್ದುಬಸ್ತಿನಲ್ಲಿಡುತ್ತಿಲ್ಲ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರದ ಮೇಲೆ ಒತ್ತಡ ತಂದು ಬಗರ್ ಹುಕಂ ಸಾಗುವಳಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು. ಜಿಲ್ಲಾಧಿಕಾರಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ವಹಿಸದೇ ಇದ್ದರೆ ಧರಣಿಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಟಿ. ಯಶವಂತ ಮಾತನಾಡಿ, ಜೆಸಿಬಿ ಬಳಸಿ ರೈತರ ಬೆಳೆ ನಾಶ ಸಂದರ್ಭದಲ್ಲಿ ರೈತ ಕುಟುಂಬದ ಆಕ್ರಂದನ, ನೋವುಗಳು ಮಾಧ್ಯಮದಲ್ಲಿ ಬಂದಾಗ ಮೊಸಳೆ ಕಣ್ಣೀರು ಸುರಿಸುವ ಸರ್ಕಾರಗಳು ಸ್ವಲ್ಪ ದಿನದ ನಂತರ ಮತ್ತೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗುತ್ತಿವೆ. ಇದಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ, ಜಿಲ್ಲೆಯ ಸಾವಿರಾರು ರೈತರು, ಕೃಷಿ ಕೂಲಿಕಾರರು, ದಲಿತರು 40-50 ವರ್ಷಗಳಿಂದ ಬಗರ್ ಹುಕಂ ಸಾಗುವಳಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಸಾಗುವಳಿ ಸಕ್ರಮ ಚೀಟಿಗಳು ಇರುವ ರೈತರನ್ನು ಸಹ ಒಕ್ಕಲೆಬ್ಬಿಸುವ ಆಕ್ರಮಣಗಳಿಗೆ ಗುರಿ ಮಾಡಲಾಗಿದೆ. ಫಾ 50, 53, 57 ರಲ್ಲಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರನ್ನು ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಲಾಗಿದೆ. ತಮ್ಮ ಹತ್ತಿರ ಇರುವ ಕಂದಾಯ ದಾಖಲಾತಿಗಳನ್ನು ತೋರಿಸಿದರೂ ಅರಣ್ಯ ಇಲಾಖೆಯ ದೌರ್ಜನ್ಯದ ಅಹಂಕಾರ ತಣಿಯುತ್ತಿಲ್ಲ ಎಂದು ದೂರಿದರು.
ಎಲ್ಲಾ ಬಗರ್ ಹುಕಂ ಭೂಮಿಗಳ ಸಕ್ರಮದ ಪ್ರಕ್ರಿಯೆಯನ್ನು ವೇಗಗೊಳಿಸಬೇಕೆಂದು ತೀರ್ಮಾನ ಮಾಡಿ ಸರ್ವೆ ವರದಿಗಳು ಬಂದ ನಂತರ ಮತ್ತೊಂದು ಸಭೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ವೆ ನಡೆಸಲಿಲ್ಲ. ಈಗಲೂ ಅರಣ್ಯ ಇಲಾಖೆಯ ತಕರಾರುಗಳಿಂದ ಬಗರ್ ಹುಕಂ ಸಾಗುವಳಿ ಸಕ್ರಮವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಟೀಕಿಸಿದರು. ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಸಿ. ಅಜ್ಜಪ್ಪ, ಮುಖಂಡರಾದ ದೊಡ್ಡನಂಜಯ್ಯ, ನರಸಿಂಹಮೂರ್ತಿ, ಕರಿಬಸವಯ್ಯ, ಚನ್ನಬಸವಣ್ಣ, ಮಂಜುನಾಥ್, ಶಿವಣ್ಣ, ಲೋಕೇಶ್, ವಿಶ್ವನಾಥ್, ಯಾದವಮೂರ್ತಿ, ರಾಚಪ್ಪ, ಮೂಡ್ಲಪ್ಪ, ಮಾರುತಿ, ಯೋಗೇಶ್, ಗೌರಮ್ಮ, ನಾಗರಾಜು ಮತ್ತಿತರರು ಪಾಲ್ಗೊಂಡಿದ್ದಾರೆ.