ತುಮಕೂರು
ದೆಹಲಿಯಲ್ಲಿ ನಿರಂತರ ಮೂರನೆ ಬಾರಿಗೆ ಅಧಿಕಾರಕ್ಕೆ ಬಂದಿರುವ ನಂತರ ಪಂಜಾಬಿನಲ್ಲಿ ಈ ಬಾರಿ ಅಧಿಕಾರ ಗದ್ದುಗೆ ಏರಿರುವ ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲೂ ಕೂಡ ಸಂಘಟನೆ ಚುರುಕುಗೊಳಿಸಿದ್ದು ಜೂ.18 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪಕ್ಷದ ಸಮಾವೇಶ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ.ಎಲ್.ವಿಶ್ವನಾಥ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೆಹಲಿ ಮುಖ್ಯಮಂತ್ರಿ ಕೆಜ್ರಿವಾಲ್ ಅವರ ಭ್ರಷ್ಟಾಚಾರರಹಿತ ನಿಷ್ಪಕ್ಷಪಾತ ಹಾಗೂ ಪಾರದರ್ಶಿಕ ಆಡಳಿತ ನೋಡಿ ದೇಶದ ಜನ ಬದಲಾವಣೆ ಬಯಸಿದ್ದು, ಎಎಪಿ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ದೇಶದ ಪ್ರಮುಖ 3 ರಾಜಕೀಯ ಪಕ್ಷಗಳಿಗಿಂತ ವೇಗವಾಗಿ ಬೆಳೆಯುತ್ತಿರುವ ಎಎಪಿಗೆ ಸಾಕಷ್ಟು ಜನಬೆಂಬಲ ವ್ಯಕ್ತವಾಗುತ್ತಿದ್ದು, ತುಮಕೂರು ಜಿಲ್ಲೆಯಾದ್ಯಂತ ಜೂ.18 ರಿಂದ ಸೆ.15ರವರೆಗೆ ಗ್ರಾಮ ಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಸೇರಿದಂತೆ ಜಿ.ಪಂ., ತಾ.ಪಂ. ಕ್ಷೇತ್ರಗಳಲ್ಲಿ ನಿರ್ವಹಣಾ ಸಮಿತಿಗಳನ್ನು ರಚನೆ ಮಾಡಿ ಗ್ರಾ.ಪಂ. ಮಟ್ಟದಿಂದ ಪಕ್ಷ ಸಂಘಟನೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಎಎಪಿ ಪಕ್ಷದ ಸರ್ಕಾರ ದೆಹಲಿ ಮತ್ತು ಪಂಜಾಬ್‍ನಲ್ಲಿ ಆಡಳಿತ ನಡೆಸುತ್ತಿದ್ದು, ಪ್ರಾಮಾಣಿಕ ಸಚಿವರು ಮತ್ತು ಶಾಸಕರು ನಮ್ಮ ಪಕ್ಷಗಳಲ್ಲಿರುವುದರಿಂದ ಶಿಕ್ಷಣ, ಆರೋಗ್ಯ, ವಿದ್ಯುತ್ ಇತ್ಯಾದಿ ಸಾರ್ವಜನಿಕ ಮೂಲಭೂತ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಕೆಜ್ರಿವಾಲ್ ಕ್ರಮಕೈಗೊಂಡಿದ್ದಾರೆ ಎಂದರು.
ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ಮತ್ತು ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ಕಾಲಕಳೆಯುತ್ತಿದ್ದು, ಅಭಿವೃದ್ಧಿ ಮತ್ತು ಪ್ರಗತಿಪರ ಯೋಜನೆಗಳ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಇದನ್ನು ಕಂಡ ಜನರಿಗೆ ಆ ಪಕ್ಷಗಳ ಬಗ್ಗೆ ಭ್ರಮನಿರಸನ ಹೊಂದಿ ಬದಲಾವಣೆ ಬಯಸಿ ಎಎಪಿಯತ್ತ ಮುಖ ಮಾಡಿದ್ದಾರೆ ಎಂದರು.
ವಿವಿಧ ಹೆಸರಾಂತ ಸಂಸ್ಥೆಗಳ ಸರ್ವೆ ಪ್ರಕಾರ ಮುಂದಿನ ದಿನಗಳಲ್ಲಿ ಈ ದೇಶ ಮತ್ತು ರಾಜ್ಯದಲ್ಲಿ ಎಎಪಿ ಪಕ್ಷಕ್ಕೆ ಉತ್ತಮ ಭವಿಷ್ಯ ಇರುವುದು ಕಂಡು ಬಂದಿದ್ದು, ಅಪಾರ ಪ್ರಮಾಣದಲ್ಲಿ ಜನ ಬೆಂಬಲವು ವ್ಯಕ್ತವಾಗುತ್ತಿವೆ ಎಂದರು.
ಕುಣಿಗಲ್ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಜಯರಾಮಯ್ಯ, ತುಮಕೂರು ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಮುನೀರ್ ಅಹಮದ್ ಗುಬ್ಬಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಪ್ರಭುಸ್ವಾಮಿ, ಇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಖಂಡರಾದ ಮಂಜುನಾಥ್, ಪ್ರೇಮಕುಮಾರ್, ಉಮರ್‍ಫರೂಕ್, ಬಷೀರ್ ಅಹಮದ್ ಮುಂತಾದವರು ಇದ್ದರು.