ತುಮಕೂರು:


ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಿಮಿತ್ತ ಮಾಯಸಂದ್ರ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ದಲಿತರ ಮನೆಯಲ್ಲಿ ಉಪಹಾರ ಸೇವಿಸಿದರು.
ಮಾಯಸಂದ್ರದ ಆದಿಚುಂಚಗಿರಿಯ ಮಠದ ಶಾಲೆಯ ಆಶ್ರಮದಲ್ಲಿ ಶಾಸಕ ಮಸಾಲೆ ಜಯರಾಂ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಿದ್ದರು.
ಅಧಿಕಾರಿಗಳೊಂದಿಗೆ ಗ್ರಾಮದ ಸುತ್ತಾಟ ನಡೆಸಿದ ಸಚಿವ ಅಶೋಕ್ ಅವರು ಬೆಳಿಗ್ಗೆ ಮಾಯಸಂದ್ರದ ಗೂಡಂಗಡಿಗೆ ತೆರಳಿ ಚಹಾ ಸೇವಿಸಿದರು.
ನಂತರ ದಲಿತ ಕೇರಿಗೆ ತೆರಳಿದ ಸಚಿವರು ದಲಿತ ಕುಟುಂಬದ ವಿನೋದ್ ಎಂಬುವರ ಮನೆಗೆ ತೆರಳಿ ಅವರ ಮನೆಯಲ್ಲಿ ಸಿದ್ದಪಡಿಸಿದ್ದ ಅಕ್ಕಿರೊಟ್ಟಿ, ಹುಚ್ಚೆಳ್ಳು ಚಟ್ನಿ, ಕೇಸರಿಬಾತ್, ಉಪ್ಪಿಟ್ಟು ಹಾಗೂ ಚಿತ್ರಾನ್ನ ಸವಿದರು.
ದಲಿತರ ಕೇರಿಗೆ ರಸ್ತೆ ನಿರ್ಮಾಣ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್ ಅವರು, ಈ ದಲಿತ ಕೇರಿಯಲ್ಲಿ ಸುಮಾರು 80 ಮನೆಗಳಿದ್ದು, ರಸ್ತೆ ಅಭಿವೃದ್ಧಿಯಾಗದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ದಲಿತ ಕೇರಿಗಳ ರಸ್ತೆ ನಿರ್ಮಾಣಕ್ಕೆ 15 ದಿನದಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ದಲಿತ ಕೇರಿಯಲ್ಲಿ ಸಿ.ಸಿ. ರಸ್ತೆಗಳ ನಿರ್ಮಾಣಕ್ಕೆ ನಮ್ಮ ಇಲಾಖೆಯಿಂದ 25 ಲಕ್ಷ ರೂ. ಹಾಗೂ ಉಳಿದ ಹಣವನ್ನು ನರೇಗಾದಡಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಇಂದು ನಾನು ದಲಿತ ಕೇರಿಗೆ ಬಂದಿದ್ದೇನೆ. ಅವರು ಮಾಡಿರುವಂತಹ ಉಪಹಾರವನ್ನು ಅವರ ಜತೆಯಲ್ಲೆ ಸೇವಿಸಿದ್ದೇನೆ.
ಒಳ್ಳೆಯ ರುಚಿತ ತಿಂಡಿ ಕೊಟ್ಟಿದ್ದಾರೆ ಎಂದ ಅವರು, ಈ ಮನೆಯ ಹುಡುಗ ಬಾಡಿಗೆ ಆಟೋ ಓಡಿಸುತ್ತಿದ್ದು, ಈತನಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಬ್ಸಿಡಿಯಲ್ಲಿ ಆಟೋ ಖರೀದಿಸಲು ಸೌಲ ಸೌಲಭ್ಯ ಕಲ್ಪಿಸಿ ಆತನ ಸ್ವಂತ ಕಾಲ ಮೇಲೆ ನಿಲ್ಲಲು ಅವಕಾಶ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ದಲಿತ, ಸವರ್ಣೀಯ ಎಲ್ಲ ಜಾತಿಯೂ ಒಂದೇ. ಹಾಗಾಗಿ ಗ್ರಾಮ ವಾಸ್ತವ್ಯದಲ್ಲಿ ದಲಿತ ಕೇರಿಗಳು ಸಮಾಜಮುಖಿಯಾಗಿ ಬಾಳುವ ಕೆಲಸವಾಗಬೇಕು. ಎಲ್ಲರೂ ಒಂದೇ ಎಂಬ ಸಂದೇಶ ಸಾರಲು ದಲಿತರ ಕೇರಿಗೆ ಬಂದು ಅವರ ಮಾಡಿರುವ ತಿಂಡಿ ಸವಿಯುತ್ತೇನೆ. ಎಲ್ಲರಲ್ಲೂ ಸಮಾನತೆ, ಸೌಹಾರ್ದತೆ ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.
ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನನಗೆ ಬಹಳ ತೃಪ್ತಿ ತಂದಿದೆ. ಗ್ರಾಮ ವಾಸ್ತವ್ಯ ನನಗೆ ಒಂದು ಪಾಠಶಾಲೆ ಇದ್ದಂತೆ. ಇದರಿಂದ ಹಳ್ಳಿ ಜನರ ಬಹುತೇಕ ಸಮಸ್ಯೆಗಳು ನನ್ನ ಅರಿವಿಗೆ ಬರುತ್ತಿವೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರ ಆಹವಾಲು ಆಲಿಸಿ, ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಮಸಾಲೆ ಜಯರಾಮ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್, ನಟರಾಜು, ತಹಶೀಲ್ದಾರ್‍ಗಳಾದ ನಯೀಂ ಉನ್ನೀಸಾ, ಆರತಿ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

(Visited 8 times, 1 visits today)