ತುಮಕೂರು:
ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರವನ್ನು ಕೊರತೆಯಾಗದಂತೆ ವಿತರಿಸಬೇಕು, ಸೂರ್ಯಕಾಂತಿ ಸೇರಿದಂತೆ ಕೆಲ ಎಣ್ಣೆಕಾಳು ಬೀಜಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದು, ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಿ.ಡಿ.ಜಯಶ್ರೀ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿ.ಡಿ.ಜಯಶ್ರೀ ಅವರು,ದೇಶ ಕೃಷಿ ಪ್ರಧಾನವಾಗಿದ್ದು, ಇಲ್ಲಿನ ಶೇ 80ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.ಕರ್ನಾಟಕದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ರಸಗೊಬ್ಬರ ಮತ್ತು ಬಿತ್ತನೆ ಬೀಜದ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.ಇದರಿಂದಾಗಿ ಜಿಲ್ಲಾ ಕೇಂದ್ರಗಳಲ್ಲಿ ಸಹಜವಾಗಿಯೇ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬೇಡಿಕೆ ಹೆಚ್ಚಿದೆ. ಆದರೆ ಕೆಲ ಕಾಳಸಂತೆಕೋರರು ಇದನ್ನೇ ಲಾಭ ಮಾಡಿಕೊಂಡು ರೈತರಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಅದ್ದರಿಂದ ಕೂಡಲೇ ಕಾಳಸಂತೆ ಕೋರರ ವಿರುದ್ದ ಜಿಲ್ಲಾಡಳಿತ ಕಠಿಣ ಕಾನೂನು ಜರುಗಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ್ ಮೇಟಿ ಮಾತನಾಡಿ,ರೈತರು ತಮಗಿರುವ ಅಲ್ಪಸ್ವಲ್ಪ ಭೂಮಿಯಲ್ಲಿಯೇ ರಾಗಿ, ಶೇಂಗಾ, ತೊಗರಿ, ಜೋಳದಂತಹ ಬೆಳೆ ಬೆಳೆಯಲ್ಲಿ ಮನೆಯಲ್ಲಿರುವ ವಡವೆ, ವಸ್ತ್ರಗಳನ್ನು ಅಡವಿಟ್ಟು ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಿತ್ತನೆ ಬೀಜ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಹಿಂದಿನ ಸಾಲಿನಲ್ಲಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿರುವ ಜನರು ಬೆಳೆಯಿಲ್ಲದೆ ಪರದಾಡುತಿದ್ದಾರೆ. ಹಾಗಾಗಿ ಕೃಷಿ ಇಲಾಖೆಯ ತಾಂತ್ರಿಕ ತಜ್ಞರ ತಂಡ ಸರಕಾರದ ಎಜೆನ್ಸಿಗಳು ಸೇರಿದಂತೆ ಎಲ್ಲಾ ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ನಡೆಸಿ, ಗುಣಮಟ್ಟ ಪರಿಶೀಲನೆ ನಡೆಸಬೇಕು. ತಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಸಂಘದವತಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಮಣ್ಣೂರು,ಪರವೀರವ್ವ, ಲಕ್ಷ್ಮಿಕಾಂತ್, ವಿಶಾಲ ರೇವಣ್ಣ,ಲೀಲಾವತಿ,ಲೀಲಮ್ಮ, ರೇಣುಕಮ್ಮ, ನಾಗರತ್ನ, ರಾಜಕುಮಾರ್,ದಿನಮಣಿ, ನವೀನ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.