ತುಮಕೂರು:
ಗಿಡಗಳನ್ನು ನೆಟ್ಟು ಒಂದು ಹಂತದವರೆಗೆ ಪೋಷಿಸಿದರೆ ಸಾಕು. ಅವುಗಳು ಮರವಾಗಿ ಮುಂದೆ ನಮಗೆ ನೆರಳಾಗಿ ನಮ್ಮನ್ನು ನೋಡಿಕೊಳ್ಳುತ್ತವೆ ಎಂದು ವಾಸವಿ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.
ನಗರದ ಕೋತಿತೋಪಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೋಮವಾರ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ, ಶ್ರೀ ವಾಸವಿ ಸಂಘ ಮತ್ತು ಪ್ರೆಸ್‍ಕ್ಲಬ್ ತುಮಕೂರು ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಉಳಿಸುವ ಪ್ರಯತ್ನ ಮಾಡಬೇಕು. ಶಾಲೆಗೆ ಬಂದಿರುವುದಕ್ಕೆ ಸಂತೋಷವಾಗುತ್ತಿದೆ.ವಿದ್ಯಾರ್ಥಿಗಳು ಚೆನ್ನಾಗಿ ಓದಿಕೊಂಡು ವಿದ್ಯಾವಂತರಾಗಿ ಎಂದು ಕರೆ ನೀಡಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸಸಿಗಳನ್ನು ನೆಟ್ಟು ಪೋಷಿಸುವುದು, ಗಿಡ-ಮರಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕರ ಜವಬ್ದಾರಿಯಾಗಿದ್ದು, ಎಲ್ಲರೂ ಗಿಡ-ಮರಗಳ ಸಂರಕ್ಷಣೆ ಜವಬ್ದಾರಿ ನಿಭಾಯಿಸಿದರೆ ಖಂಡಿತಾ ಹಸಿರು ತುಮಕೂರು ಸಾಧ್ಯ, ಸಸಿಗಳನ್ನು ನೆಡುವುದರ ಜತೆಗೆ ಉಳಿಸಿ ಬೆಳೆಸಬೇಕು. ಸಾಧ್ಯವೆಂದು ಆಶಿಸಿದರು. ವೃಕ್ಷಮಿತ್ರ ಪೋ.ಕೆ.ಸಿದ್ಧಪ್ಪ ಅವರು ಮರಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದಾರೆ. ಇಂತಹವರ ಕೆಲಸಗಳು ನಮಗೆ ಆದರ್ಶವೆಂದರು.
ವಾಸವಿ ಸಂಘದ ಅಧ್ಯಕ್ಷ ಆರ್.ಎಲ್. ರಮೇಶ್ ಬಾಬು ಮಾತನಾಡಿ, ಚೆನ್ನಾಗಿ ಓದುವ ಅವಕಾಶವಿದೆ. ವಾಸವಿ ಸಂಘ, ಆರ್ಯವೈಶ್ಯ ಸಮಾಜ ಸದಾ ವಿದ್ಯಾರ್ಥಿಗಳಿಗೆ ತನು-ಮನ-ಧನ ಸಹಕಾರ ನಿಂತು ಜತೆಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದ ಆಸ್ತಿಯಾಗಬೇಕು. ಜಾತಿ, ಧರ್ಮ ಬೇಧವಿಲ್ಲದೆ, ಹಿಂದುಳಿದವರು, ದಲಿತರು ಎಂಬ ಕೀಳರಿಮೆ ಇಲ್ಲದೆ ಬದುಕು ನಡೆಸಬೇಕು. ನಾವೆಲ್ಲಾ ಈ ದೇಶದ ಪ್ರಜೆಗಳು, ಎಲ್ಲರೂ ಒಂದೇ ಎಂದರು.
ಕಾರ್ಯಕ್ರಮದಲ್ಲಿ ವೃಕ್ಷಮಿತ್ರ ಕೆ.ಸಿದ್ದಪ್ಪ, ಶಾಲಾ ಮುಖ್ಯೋಪಧ್ಯಾಯ ದೊಡ್ಡಚಿಕ್ಕಣ್ಣ, ಶಿಕ್ಷಕರಾದ ಭಾಗ್ಯಮ್ಮ ಎಸ್., ಶಾಂತಕುಮಾರಿ ಎಸ್.ಐ, ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ಎಸ್.ದೋಣಿಹಕ್ಲು, ಮುಖಂಡರಾದ ವಾಲೆ ಚಂದ್ರಯ್ಯ, ನರಸಿಂಹಯ್ಯ, ಶ್ರೀನಿವಾಸ್, ಶೆಟ್ಟಾಳಯ್ಯ, ನಟರಾಜು ಮತ್ತಿತರರಿದ್ದರು.