ತುಮಕೂರು:
ಕಳೆದ 12 ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಮೂರು ವರ್ಷಗಳಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರೊಂದಿಗೆ ಬೇರೆತು, ಅವರ ಕಷ್ಟ ಸುಖಃಗಳಿಗೆ ಸ್ಪಂದಿಸುತ್ತಿರುವ ನನಗೆ ಮುಂಬರುವ 2023ರ ವಿಧಾನಸಭಾ ಟಿಕೇಟ್ ನೀಡುವಂತೆ ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಪಕ್ಷವನ್ನು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೋಲಾರ ಜಿಲ್ಲೆ ಆನೆಕಲ್ ತಾಲೂಕಿನವನಾದ ನಾನು,ಬೋವಿ ಸಮುದಾಯಕ್ಕೆ ಸೇರಿದ್ದೇನೆ. ಕೊರಟಗೆರೆ ಕ್ಷೇತ್ರದ ಪುರುವರ ಗ್ರಾಮದ ಬಳಿ 50 ಎಕರೆಗೂ ಹೆಚ್ಚು ಕೃಷಿ ಜಮೀನು ಹೊಂದಿದ್ದು, ಕೃಷಿಯ ಜೊತೆಗೆ ಗುತ್ತಿಗೆದಾರನಾಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿರುತ್ತೇನೆ. ಕೃಷಿಕಾರ್ಯ ಗಳಿಗೆ ಕೊರಟಗೆರೆಗೆ ಬಂದು ಹೋಗುವ ಸಂದರ್ಭದಲ್ಲಿ ರಾಜಕೀಯ ಆಸಕ್ತಿಯಿಂದ ಮೀಸಲು ಕ್ಷೇತ್ರವಾಗಿರುವ ಕೊರಟಗೆರೆ ಯಿಂದ ಸ್ಪರ್ಧಿಸಲು ಅವಕಾಶ ಸಿಗಬಹುದೆ ಎಂಬ ಇಚ್ಚೆಯನ್ನು ಬಿಜೆಪಿ ಜಿಲ್ಲಾ ಮತ್ತು ತಾಲೂಕು ಮುಖಂಡರ ಬಳಿ ವ್ಯಕ್ತಪಡಿಸಿದಾಗ, ಕೊರಟಗೆರೆ ಮಂಡಲ ಅಧ್ಯಕ್ಷರಾದ ಪವನ್ ಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜರವರುಗಳು ನೀವು ಕ್ಷೇತ್ರದಲ್ಲಿ ಕೆಲಸ ಮಾಡಿ,ಪಕ್ಷದಿಂದ ನಿಮಗೆ ಟಿಕೇಟ್ ದೊರಕಿಸಿಕೊಡುವ ಭರವಸೆ ನೀಡಿದ್ದರು ಎಂದರು.
ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಲಹೆಯಂತೆ ಕೋರೋನ ಒಂದು ಮತ್ತು ಎರಡನೇ ಅಲೆಯಲ್ಲಿ ಸಂಕಷ್ಟಕ್ಕೀಡಾದ ಜನರಿಗೆ ದಿನಸಿಕಿಟ್ ವಿತರಣೆ,ಆಹಾರ ಪೊಟ್ಟಣಗಳ ಪೂರೈಕೆ,ಧನ ಸಹಾಯ, ಸ್ಯಾನಿಟೈಜರ್, ಮಾಸ್ಕ್ ವಿತರಣೆ ಸೇರಿದಂತೆ ನನ್ನ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದೇನೆ.ಇದರ ಜೊತೆಗೆ ದೇವಾಲಯಗಳ ಅಭಿವೃದ್ದಿ ಮತ್ತು ಜೀರ್ಣೋದ್ದಾರಕ್ಕೆ ಅರ್ಥಿಕ ಸಹಾಯ ಮಾಡುತ್ತಾ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ.ಈ ಎಲ್ಲಾ ಕಾರ್ಯಗಳನ್ನು ಮಂಡಲ ಅಧ್ಯಕ್ಷರಾದ ಪವನಕುಮಾರ್ ಮತ್ತು ಜಿಲ್ಲಾ ಕಾರ್ಯದರ್ಶಿ ತಿಮ್ಮಜ್ಜಯ್ಯನವರ ಸಮ್ಮುಖದಲ್ಲಿಯೇ ಮಾಡಿದ್ದೇನೆ.ನನ್ನ ಜನಸೇವೆಯನ್ನು ಕ್ಷೇತ್ರದ ಜನರು ಮೆಚ್ಚಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಕೆ.ಎಂ.ಮುನಿಯಪ್ಪ ತಿಳಿಸಿದರು.
ಕಳೆದ ಕೆಲ ದಿನಗಳಿಂದ ಕೊರಟಗೆರೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನನ್ನನು ಹೊರತು ಪಡಿಸಿ ಬೇರೆಯವರ ಹೆಸರು ಕೇಳಿ ಬರುತ್ತಿದೆ.ಅವರು ಯಾರು ಎಂಬುದು ನನಗೆ ಗೊತ್ತಿಲ್ಲ. ಪಕ್ಷದ ಮುಖಂಡರ ಮಾತು ನಂಬಿ ಕಳೆದ ಮೂರು ವರ್ಷಗಳಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು,ಏಕಾಎಕಿ ಬೇರೆಯವರ ಹೆಸರು ಕೇಳಿ ಬರುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಹಾಗಾಗಿ ಪಕ್ಷದ ಮುಖಂಡರು ಸಹ ಇದನ್ನು ಸ್ಪಷ್ಟಪಡಿಸಬೇಕು ಹಾಗೆಯೇ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ದುಡಿಯುತ್ತಿರುವ ನನಗೆ ಟಿಕೇಟ್ ನೀಡಬೇಕೆಂಬುದು ನನ್ನ ಒತ್ತಾಯವಾಗಿದೆ ಎಂದು ಕೆ.ಎಂ.ಮುನಿಯಪ್ಪ ತಿಳಿಸಿದರು.
ನಾನು ಯಾರ ಅನುಯಾಯಿಯು ಅಲ್ಲ, ಅಲ್ಲದೆ ಯಾರ ಪರವಾಗಿಯೂ ಪಕ್ಷದ ಮತಗಳನ್ನು ಚಿದ್ರಗೊಳಿಸಲು ಎಂ.ಎಲ್.ಎ ಟಿಕೇಟ್ ಕೇಳುತ್ತಿಲ್ಲ. ಈಗಾಗಲೇ ಅನೇಕಲ್‍ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, 26 ಮತಗಳನ್ನು ಪಡೆದಿದ್ದೇನೆ.ಹಿರಿಯರ ಮಾರ್ಗದರ್ಶನದಂತೆ ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಇಚ್ಚೆಯಿಂದ ಕಳೆದ ಮೂರು ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ಶ್ರಮಿಸಿದ್ದೇನೆ. ಗುತ್ತಿಗೆ ಮಾಡುವುದು ನನ್ನ ವೃತ್ತಿ.ಅದನ್ನು ಬಿಟ್ಟರೆ ಯಾರ ಪರವಾಗಿಯೂ, ಇನ್ನೋಬ್ಬರ ಸೋಲಿಸುವ ಉದ್ದೇಶದಿಂದ ಸ್ಪರ್ಧೆಗೆ ಇಳಿದಿಲ್ಲ ಎಂದು ಕೆ.ಎಂ.ಮುನಿಯಪ್ಪ ಸ್ಪಷಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಾದ ಕಾಶಿನಾಥ್, ತ್ರಿಲೋಚನ್ ಮತ್ತಿತರರು ಉಪಸ್ಥಿತರಿದ್ದರು.