ತುಮಕೂರು:
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರ್ ಅವರು ಬುಧವಾರ ನಿರ್ಗಮಿತ ಅಧ್ಯಕ್ಷ ಬಿ.ಎಸ್. ನಾಗೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು.
ನೂತನ ಅಧ್ಯಕ್ಷ ಚಂದ್ರಶೇಖರ್ ಅವರು ದಾಖಲಾತಿಗೆ ಸಹಿ ಮಾಡುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ವಹಿಸಿಕೊಂಡರು.
ಇದೇ ವೇಳೆ ನೂತನ ಸದಸ್ಯರುಗಳಾಗಿ ಎನ್.ಹೆಚ್. ಜಗದೀಶ್, ಪಿ.ಹೆಚ್. ನಾಗರತ್ನಮ್ಮ, ಮಾಯರಂಗಣ್ಣ, ಎಲ್.ಪಿ. ಸುಧೀಂದ್ರ ಅವರೂ ಸಹ ಪದಗ್ರಹಣ ಮಾಡಿದರು.
ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಳೆದ 22 ತಿಂಗಳಿನಿಂದ ನಿರ್ಗಮಿತ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಮತ್ತು ಅವರ ತಂಡದವರು ತುಮಕೂರಿನ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ರಿಂಗ್ ರಸ್ತೆ ಸೇರಿದಂತೆ ನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವಲ್ಲೂ ಸಹ ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದು ಸ್ಮರಿಸಿದರು.
ಟೂಡಾಗೆ ಮತ್ತೊಬ್ಬ ಸದಸ್ಯರ ನೇಮಕ ಆಗಬೇಕಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಸದ್ಯದಲ್ಲೇ ಬಾಕಿ ಇರುವ ಮತ್ತೊಬ್ಬ ಸದಸ್ಯರ ನೇಮಕಾತಿ ಆಗಲಿದೆ ಎಂದು ಹೇಳಿದರು.
ಟೂಡಾ ನೂತನ ಅಧ್ಯಕ್ಷ ಚಂದ್ರಶೇಖರ್ ಮತ್ತು ಸದಸ್ಯರು ನಿರ್ಗಮಿತ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಮತ್ತು ಸದಸ್ಯರುಗಳ ಸಲಹೆ, ಮಾರ್ಗದರ್ಶನ ಪಡೆದು ಕೆಲಸ ಮಾಡಿದರೆ ಹೊಸ ಹೊಸ ಲೇಔಟ್ ನಿರ್ಮಾಣ ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬಹುದಾಗಿದೆ ಎಂದು ತಿಳಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ತುಮಕೂರಿನ ಅಭಿವೃದ್ಧಿಯೇ ನನ್ನ ಧ್ಯೇಯ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಓರ್ವ ಉದ್ಯಮಿಯಾಗಿದ್ದರೂ ಸಹ ಕಾಲು ಭಾಗ ಸಮಾಜ ಸೇವೆಗೆ ಮೀಸಲಿಟ್ಟು ಕೆಲಸ ನಿರ್ವಹಿಸುತ್ತಿದ್ದೇನೆ. ಈ ಹಿಂದೆ ರೋಟರಿ ಅಧ್ಯಕ್ಷನಾಗಿ, ಛೇಂಬರ್ಸ್ ಆಫ್ ಕಾಮರ್ಸ್‍ನಲ್ಲೂ ಸಾಕಷ್ಟು ಕೆಲಸ ಮಾಡಿದ್ದೇನೆ, ರೆಡ್ ಕ್ರಾಸ್ ಛೇರ್ಮೆನ್ ಆಗಿಯೂ ಕೆಲಸ ನಿರ್ವಹಿಸಿದ್ದು, ಈ ಎಲ್ಲದರ ಅನುಭವದಿಂದ ಇಂದು ನನಗೆ ಟೂಡಾ ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿದ್ದಾರೆ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು.
ಟೂಡಾಗೆ ಬರಬೇಕಾಗಿರುವ ಸಂಪನ್ಮೂಲಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕಿದೆ. ಸಂಪನ್ಮೂಲ ಕ್ರೂಢೀಕರಣಕ್ಕೆ ಮೊದಲು ಆಧ್ಯತೆ ನೀಡಲಾಗುವುದು. ಹಿಂದಿನ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣನವರ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ನಾವು ಸಹ ಅದೇ ರೀತಿಯ ಸಂಪನ್ಮೂಲ ಕ್ರೂಢೀಕರಿಸಿಕೊಂಡು ಕೆಲಸ ಮಾಡಿ, ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುವುದರ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನಾನು ಸುಮಾರು 40 ದೇಶಗಳನ್ನು ಸುತ್ತಿ ಬಂದಿದ್ದೇನೆ. ಅದರಲ್ಲಿ ಚೀನಾ ದೇಶಕ್ಕೆ ಸಾಕಷ್ಟು ಭಾರಿ ಪ್ರವಾಸ ಕೈಗೊಂಡು ಅಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಅಧ್ಯಯನ ಮಾಡಿ ಬಂದಿದ್ದೇನೆ. ತುಮಕೂರಿನಲ್ಲೂ ಸಹ ಯಾವ ರೀತಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಯೋಜನೆಯನ್ನು ಸಿದ್ಧಪಡಿಸಿ ಮೂಲಭೂತ ಸೌಕರ್ಯಕ್ಕೆ ಆಧ್ಯತೆ ನೀಡುವುದಾಗಿ ಹೇಳಿದರು.
ಪಕ್ಷ, ಶಾಸಕರು ನನ್ನ ಮೇಲೆ ವಿಶ್ವಾಸವಿಟ್ಟು ಟೂಡಾ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು.
ನಿರ್ಗಮಿತ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಟೂಡಾ ಅಧ್ಯಕ್ಷರನ್ನಾಗಿ ಪಕ್ಷ, ಶಾಸಕರು, ಸಂಸದರು ನೇಮಕ ಮಾಡಿದ್ದರು. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳು ಯಾವುದಕ್ಕೂ ಹೆದರದೆ ನಿರ್ಭೀತಿಯಿಂದ ಕೆಲಸ ಮಾಡಿಕೊಂಡು ಹೋಗಬೇಕು. ನಗರದ ನಾಗರಿಕರು, ಟೂಡಾ ಅಧಿಕಾರಿಗಳ ಸಹಕಾರ ಪಡೆದು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಬಿಜೆಪಿ ಮುಖಂಡರುಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ಟೂಡಾ ಆಯುಕ್ತ ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.