ತುಮಕೂರು:
ನಗರದ ಎಪಿಎಂಸಿ ಯಾರ್ಡ್‍ನ ಶ್ರಮಿಕರ ಭವನದಲ್ಲಿ ತುಮಕೂರು ಜಿಲ್ಲಾ ಹಮಾಲ ಮಂಡಿ ಮತ್ತು ಕೂಲಿ ಕಾರ್ಮಿಕರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷ ಬಿ.ಹೆಚ್.ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಂಘದ ಸದಸ್ಯರಿಗೆ ಇ-ಶ್ರಮ ಕಾರ್ಡು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್, ಶ್ರಮ ಜೀವಿಗಳಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇ-ಶ್ರಮ ಕಾರ್ಡು ಜಾರಿಗೆ ತಂದಿದ್ದು, ಇದರ ಪ್ರಯೋಜನವನ್ನು ಎಲ್ಲ ಶ್ರಮಿಕರು ಪಡೆಯಬೇಕು. ಇ-ಶ್ರಮ ಕಾರ್ಡಿನಿಂದ ಭವಿಷ್ಯದಲ್ಲಿ ಶ್ರಮಜೀವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.ಪ್ರಧಾನಮಂತ್ರಿ ಜೀವನ್ ಭೀಮಾ ವಿಮೆ ಜೊತೆಗೆ ಜಾರಿಯಲ್ಲಿರುವ ವಿಮಾ ಯೋಜನೆಗಳು ಲಾಭ ದೊರೆಯಲಿದೆ.ಮೊದಲು ಕಟ್ಟಡ ಕಾರ್ಮಿಕರಿಗೆ ಮಾತ್ರ ಲಭ್ಯವಾಗುತ್ತಿದ್ದ ಎಲ್ಲಾ ಪ್ರಯೋಜನಗಳು, ಈಗ ಸುಮಾರು 60ಕ್ಕೂ ಹೆಚ್ಚು ಕೆಲಸಗಳನ್ನು ಗುರುತಿಸಲಾಗಿದೆ. ಹಾಗಾಗಿ ಎಲ್ಲ ಶ್ರಮ ಜೀವಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿವೆ ಎಂದರು.
ಕೊರೋನ ಸಂದರ್ಭದಲ್ಲಿ ಕೆಲವರು ಸರಕಾರದ ಯೋಜನೆಗಳನ್ನು ಉಳ್ಳುವರ ಪಡೆಯುವ ಮೂಲಕ ದುರುಪಯೋಗ ಪಡಿಸಿಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಅದನ್ನು ಹೊರತು ಪಡಿಸಿ, ಎಲ್ಲರೂ ಭಾರತ ಸರಕಾರದ ಆಯುಷ್ಮಾನ ಭಾರತ್ ಕಾರ್ಡು ಪಡೆಯುವ ಮೂಲಕ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿಯೂ 5 ಲಕ್ಷ ರೂಗಳವರೆಗೆ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಇದು ಎಪಿಎಲ್ ಮತ್ತು ಬಿಪಿಎಲ್ ಎರಡು ವರ್ಗದವರಿಗೂ ದೊರೆಯಲಿದ್ದು, ಸಂಘದ ಸದಸ್ಯರು ಮುತುವರ್ಜಿ ವಹಿಸಿ, ಈ ಅಯುಷ್ಮಾನ್ ಭಾರತ್ ಕಾರ್ಡು ದೊರೆಯುವಂತೆ ವ್ಯವಸ್ಥೆ ಮಾಡಬೇಕೆಂದು ಶಾಸಕ ಜೋತಿಗಣೇಶ್ ಮನವಿಮಾಡಿದರು.
ಸಮಾಜದಲ್ಲಿ ತಳಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ,ಪರಿವರ್ತನೆ ತಂದವರಲ್ಲಿ ಡಾ.ಬಿ,ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರು ಪ್ರಮುಖರು, ಸಮಾಜದಲ್ಲಿದ್ದ ಮೌಢ್ಯವನ್ನು ತೊಲಗಿಸಿ, ಎಲ್ಲಾ ಜಾತಿ, ವರ್ಗಗಳ ಜನರ ನಡುವೆ ಪರಸ್ವರ ವಿಶ್ವಾಸ ಮೂಡಿಸುವ ಕೆಲಸಗಳನ್ನು ಬಸವಣ್ಣನವರು ಮಾಡಿದರೆ, ಶತಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಿ, ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದರು. ಇಂತಹವರನ್ನು ನೆನೆಯುತ್ತಿರುವುದು ಸಂತೋಷದ ವಿಚಾರ ಎಂದು ಶಾಸಕ ಜೋತಿಗಣೇಶ್ ತಿಳಿಸಿದರು.
ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಕೆ.ಎಂ.ಉಮೇಶಗೌಡ, ಕಾರ್ಯದರ್ಶಿ ಶ್ರೀಮತಿ ಎಂ.ವಿ.ಸುಮ, ಸಹಕಾರ್ಯದರ್ಶಿ ಲಕ್ಷ್ಮಿಕಾಂತ್, ಮಂಡಿ ವರ್ತಕರ ಸಂಘದ ಅಧ್ಯಕ್ಷ ಪರಮಶಿವಯ್ಯ, ನಿರ್ದೇಶಕರಾದ ಸುರೇಶಕುಮಾರ್, ಈಶ್ವರಗುಪ್ತ, ಹಮಾಲರ ಸಂಘದ ಉಪಾಧ್ಯಕ್ಷ ಮೂರ್ತಿ ಸೇರಿದಂತೆ ಎಲ್ಲಾ ಹಮಾಲರು, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.