ಗುಬ್ಬಿ:

ಯಾವುದೇ ವಿವಾದವನ್ನು ಪೊಲೀಸ್ ಠಾಣೆ ಮೂಲಕ ಬಗೆಹರಿಸಿಕೊಳ್ಳಬೇಕು. ಕಾನೂನು ಹೊರತಾದ ಘಾತುಕರ ಬಳಕೆಗೆ ಮುಂದಾದ ಸಂದರ್ಭದಲ್ಲಿ ಅಪರಾಧ ಕೃತ್ಯಗಳ ಹೆಚ್ಚಳವಾಗುತ್ತದೆ. ಈ ನಿಟ್ಟಿನಲ್ಲಿ ಜನ ಸಾಮಾನ್ಯರು ಪೊಲೀಸ್ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಮನವಿ ಮಾಡಿದರು.
ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಈಚೆಗೆ ಭೂಮಿಗೆ ಬೆಲೆ ಬಂದ ಹಿನ್ನಲೆ ಈ ಭಾಗದಲ್ಲಿ ವಿವಾದಗಳು ತಲೆ ಎತ್ತುತ್ತಿವೆ. ಈ ಹಿನ್ನೆಲೆಯಲ್ಲಿ ಮಾಫಿಯಾಗಳು ತಲೆ ಎತ್ತುತ್ತವೆ. ಯಾವುದೇ ಭೂ ವಿವಾದ ಇದ್ದಲ್ಲಿ ಠಾಣೆಯನ್ನೇ ಸಂಪರ್ಕಿಸಿ ಎಂದು ಸಲಹೆ ನೀಡಿದರು.
ಕಾನೂನಾತ್ಮಕ ಹಂತಗಳನ್ನು ಬಳಸಿಕೊಂಡು ನ್ಯಾಯಯುತ ಹೋರಾಟ ಮಾಡಲು ಮುಂದಾಗಬೇಕು. ಸಮಾಜ ಸ್ವಾಸ್ಥ್ಯ ಕಾಪಾಡುವ ಹೊಣೆ ಸಾರ್ವಜನಿಕರ ಮೇಲಿದೆ ಎಂದ ಅವರು ಠಾಣೆಯಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂಬ ದೂರುಗಳು ಸಾಕಷ್ಟು ಬಂದಿವೆ. ಕೂಡಲೇ ಸರಿಪಡಿಸುವ ಕ್ರಮ ವಹಿಸಲಾಗುವುದು. ಕರ್ತವ್ಯ ಲೋಪ ಹಿನ್ನಲೆ ಗುಬ್ಬಿ ಪಿಎಸೈ ನಟರಾಜು ಸಸ್ಪೆಂಡ್ ಆಗಿರುವ ಬಗ್ಗೆ ಈ ಸಂದರ್ಭದಲ್ಲಿ ಹೇಳಬೇಕಿದೆ. ಠಾಣೆಯಲ್ಲಿ ಮಧ್ಯವರ್ತಿಗಳ ಹಾವಳಿ ಬಗ್ಗೆ ಕೂಡಾ ದೂರು ಬಂದಿತ್ತು. ಪ್ರಕರಣ ದಾಖಲು ಮಾಡುವಲ್ಲಿ ಸಹ ವಿಳಂಬ ಅನುಸರಿಸಿರುವುದು ಸಹ ಕೇಳಿ ಬಂದಿತ್ತು ಎಂದು ಹೇಳಿದರು.
ಪಟ್ಟಣದ ಪ್ರಮುಖ ಎಂಜಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಜಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪಾದಚಾರಿಗಳು ಓಡಾಡುವುದು ಕಷ್ಟ ಎಂಬ ಚರ್ಚೆ ಸಾರ್ವಜನಿಕರು ಮಾಡಿದರು. ಈ ಜೊತೆಗೆ ಶಾಲಾ ಕಾಲೇಜು ಅವಧಿಯಲ್ಲಿ ಮಕ್ಕಳು ಓಡಾಡುವುದು ಕಷ್ಟವಾಗಿದೆ. ಸುಮಾರು 5 ಸಾವಿರಕ್ಕೂ ಅಧಿಕ ಮಕ್ಕಳು ಈ ಸಂದರ್ಭದಲ್ಲಿ ಹೆದ್ದಾರಿಯಲ್ಲೇ ನಡೆದು ಸರ್ಕಲ್ ಮತ್ತು ಬಸ್ ನಿಲ್ದಾಣಕ್ಕೆ ತೆರಳುತ್ತಾರೆ. ಪುಟ್ ಪಾತ್ ಇಲ್ಲದ ರಸ್ತೆಯಲ್ಲಿ ಮಕ್ಕಳ ಓಡಾಟ ಕಷ್ಟವಾಗಿದೆ ಎಂದು ವಿವರಿಸಿದರು.
ಕೂಡಲೇ ಸ್ಪಂದಿಸಿದ ವರಿಷ್ಠಾಧಿಕಾರಿಗಳು ಸಿಬ್ಬಂದಿ ಕೊರತೆ ಬಗ್ಗೆ ಮಾತನಾಡದೇ ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಕ್ರಮ ವಹಿಸಿ ದಿನ ಬಿಟ್ಟು ದಿನ ಒಂದಡೆ ಪಾರ್ಕಿಂಗ್ ವ್ಯವಸ್ಥೆ ಮತ್ತು ಶಾಲಾ ಅವಧಿಯಲ್ಲಿ ಇಬ್ಬರು ಸಿಬ್ಬಂದಿ ನೇಮಕ ಮಾಡುವ ಮಾತು ಕೊಟ್ಟರು.
ನಂತರ ಹಾಗಾಲವಾಡಿ ಮಾದಲಾಪುರ ಹಾಗೂ ಕರಡಿಕಲ್ಲು ಬಳಿಯ ಜಮೀನು ವಿವಾದದ ವೇಳೆ ಚೇಳೂರು ಪಿಎಸೈ ಸ್ಪಂದಿಸಿಲ್ಲ ಎಂಬ ದೂರು ಸಭೆಯಲ್ಲಿ ಪ್ರಸ್ತಾಪಿಸಿದರು. ಸಾರ್ವಜನಿಕರ ಬಳಿ ಒರಟು ವರ್ತನೆ ತೋರಿದ್ದಾರೆ. ಜನಸ್ನೇಹಿಯಂತೆ ವರ್ತನೆ ಮಾಡಿಲ್ಲ ಎಂದು ದೂರಿದರು.
ಅಪಘಾತ ತಡೆ ಬಗ್ಗೆ ಕೂಡಾ ಚರ್ಚಿಸಿದರು. ಎಲ್ಲವನ್ನೂ ಆಲಿಸಿದ ಜಿಲ್ಲಾ ವರಿಷ್ಠಾಧಿಕಾರಿಗಳು ಅಪಘಾತಗಳು ಈಚೆಗೆ ಹೆಚ್ಚಾದ ಹಿನ್ನಲೆ ಅಪಘಾತ ವಲಯಗಳನ್ನು ಗುರುತಿಸಿ ಅಗತ್ಯ ಕ್ರಮ ವಹಿಸುವ ಬಗ್ಗೆ ತಿಳಿಸಿ ದೂರು ಬಂದ ಠಾಣೆಯ ಸಿಬ್ಬಂದಿಗಳ ವರ್ತನೆ ಸರಿಪಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಸಿಪಿಐ ನದಾಫ್, ಚೇಳೂರು ಪಿಎಸೈ ವಿಜಯಕುಮಾರಿ, ಸಿ.ಎಸ್.ಪುರ ಪಿಎಸೈ ರಾಮಕೃಷ್ಣಯ್ಯ ಇತರರು ಇದ್ದರು.

(Visited 5 times, 1 visits today)