ತುಮಕೂರು:


ನಗರದ ಸರ್ವತೋಮುಖ ಅಭಿವೃದ್ಧಿಯ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಯವರ ಸ್ಮಾರ್ಟ್‍ಸಿಟಿ ಯೋಜನೆಗೆ ಸಲ್ಲಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ತುಮಕೂರು ನಗರ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗದಿದ್ದರೆ ನಗರದ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ 2ನೇ ಹಂತದಲ್ಲಿ ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾದ ನಂತರ ಸುಮಾರು 900 ಕೋಟಿ ರೂ. ವೆಚ್ಚದಲ್ಲಿ 128 ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ ಎಂದರು.
ನಗರದ ಆಲದಮರ ಪಾರ್ಕ್‍ನಲ್ಲಿ ಏರ್ಪಡಿಸಿದ್ದ ಸ್ಮಾರ್ಟ್‍ಸಿಟಿ ಯೋಜನೆಯ 7ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ 2015ರ ಜೂನ್ 25 ರಂದು ಸ್ಮಾರ್ಟ್‍ಸಿಟಿ ಯೋಜನೆ ಘೋಷಣೆಯಾಗಿ ಇಂದಿಗೆ 7 ವರ್ಷ ಸಂದಿದೆ. ಈ ಯೋಜನೆಗೆ ತುಮಕೂರು ಆಯ್ಕೆಯಾಗಿ 5 ವರ್ಷವಾಗಿದ್ದು, ನಗರದಲ್ಲಿ ಸುಮಾರು 151 ಅಭಿವೃದ್ಧಿ ಯೋಜನೆಗಳು ಚಾಲನೆಯಲ್ಲಿವೆ. ಹೊಸದಾಗಿ 27 ಯೋಜನೆಗಳು ಟೆಂಡರ್ ಹಂತದಲ್ಲಿದ್ದು, ಒಟ್ಟು 178 ಯೋಜನೆಗಳು ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿವೆ ಎಂದರು. ನಗರದ ಮಧ್ಯೆ ಭಾಗದಲ್ಲಿರುವ ಬಡಾವಣೆಗಳನ್ನು ಅಭಿವೃದ್ಧಿಪಡಿಸುವುದೇ ಸ್ಮಾರ್ಟ್‍ಸಿಟಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಜತೆಗೆ ತುಮಕೂರು ಅಮಾನಿಕೆರೆಯನ್ನೇ ಕೇಂದ್ರ ಬಿಂದುವಾಗಿಸಿಕೊಂಡು ತುಮಕೂರು ನಗರವನ್ನು ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಸುಮಾರು 70-80 ಕೋಟಿ ರೂ. ವೆಚ್ಚದಲ್ಲಿ ಅಮಾನಿಕೆರೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಅಭಿವೃದ್ಧಿಗೆ 5 ಕೋಟಿ ರೂ., ಜೂನಿಯರ್ ಕಾಲೇಜು ಅಭಿವೃದ್ಧಿಗೆ 7-8 ಕೋಟಿ ರೂ. ಹಾಗೂ 2-3 ಕೋಟಿ ರೂ. ವೆಚ್ಚದಲ್ಲಿ ಹೈಸ್ಕೂಲ್ ತರಗತಿ ಕೊಠಡಿ ನಿರ್ಮಾಣ ಮಾಡಿಕೊಡಲಾಗಿದೆ ಎಂದರು.
ಸ್ಮಾರ್ಟ್‍ಸಿಟಿ ಯೋಜನೆಯಡಿ ರಿಂಗ್ ರಸ್ತೆ ಅಭಿವೃದ್ಧಿಗೆ 86 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹಾಗೆಯೇ ಮಹಾತ್ಮಗಾಂಧಿ ಕ್ರೀಡಾಂಗಣ ಅಭಿವೃದ್ಧಿ ಕಾರ್ಯವೂ ನಡೆಯುತ್ತಿದೆ ಎಂದ ಅವರು, ಸುಮಾರು 250 ಕೋಟಿ ರೂ.ಗೂ ಅಧಿಕ ಹಣವನ್ನು ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದರು. ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆಲದಮರ ಪಾರ್ಕ್‍ನ್ನು 70-80 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಅಭಿವೃದ್ಧಿಪಡಿಸಿದ ನಂತರ ಈ ಪಾರ್ಕ್ ಕುಡುಕರ ತಾಣವಾಗಿ ಮಾರ್ಪಟ್ಟಿತ್ತು. ಅಲ್ಲದೆ ಇಲ್ಲಿನ ಪರಿಕರಗಳನ್ನು ಒಡೆದು ಹಾಕುತ್ತಿದ್ದರು. ಪ್ರೆಸ್‍ಕ್ಲಬ್ ದತ್ತು ಪಡೆದ ಮೇಲೆ ಸಮಾಜಮುಖಿ, ಪರಿಸರ ಕಾಳಜಿ ಕಾರ್ಯಕ್ರಮಗಳು ನಡೆಯುತ್ತಿವೆ. ಇದೊಂದು ಉತ್ತಮ ಬೆಳವಣಿಗೆ ಎಂದರು. ದೇಶದಲ್ಲೇ ತುಮಕೂರು ಸ್ಮಾರ್ಟ್‍ಸಿಟಿ 7ನೇ ಸ್ಥಾನದಲ್ಲಿದ್ದು, ಕರ್ನಾಟಕ ರಾಜ್ಯದಲ್ಲಿ ನಂ. 1 ಸ್ಮಾರ್ಟ್‍ಸಿಟಿ ಆಗಿ ಹೊರ ಹೊಮ್ಮಿದೆ. ಮುಂದೆಯೂ ಈ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗುಣಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸ್ಮಾರ್ಟ್‍ಸಿಟಿ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ತುಮಕೂರಿನ 35 ವಾರ್ಡ್‍ಗಳ ಸುಮಾರು 60ಕ್ಕೂ ಹೆಚ್ಚು ಪಾರ್ಕ್‍ಗಳಿಗಾಗಿ 30 ಕೋಟಿಗೂ ಹಣವನ್ನು ವ್ಯಯಿಸಲಾಗಿದೆ. ಜ್ಯೂನಿಯರ್ ಕಾಲೇಜಿನಲ್ಲಿ ನೂತನ ಕಟ್ಟಡಗಳಿಗೆ ಅನುದಾನವನ್ನು ಒದಗಿಸಲಾಗಿದೆ. ನಗರದ ಜನರ ಆರೋಗ್ಯ ರಕ್ಷಣೆಗಾಗಿ ಸ್ಮಾರ್ಟ್ ಸಿಟಿ ವತಿಯಿಂದ ಟ್ರಾಮಾ ಕೇರ್ ಸೆಂಟರ್, ವಿವಿಧ ಆರೋಗ್ಯ ಕೇಂದ್ರಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

(Visited 1 times, 1 visits today)