ತುಮಕೂರು:
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಂತೆ ಜೂನ್ 26ರ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರುಗಳಿಗಾಗಿ ನವಚೈತನ್ಯ ಚಿಂತನಾ ಶಿಬಿರವನ್ನು ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಡಾ.ಹೆಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ತುಮಕೂರು ಉಸ್ತುವಾರಿಗಳಾದ ವಿಧಾನಪರಿಷತ್ ಸದಸ್ಯ ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ರೈತರು, ಕಾರ್ಮಿಕರು, ಸಾರ್ವಜನಿಕರು ಹಾಗೂ ಯುವಜನತೆಯನ್ನು ಒಳಗೊಂಡು ಸಮಾಜದ ಎಲ್ಲಾ ವರ್ಗಗಳ ಬೇಡಿಕೆಗಳ ಕುರಿತು ಆರು ವಿಭಾಗಗಳಲ್ಲಿ ಚಿಂತನೆ ನಡೆಸಿ,ಅಂತಿಮ ನಿರ್ಣಯವನ್ನು ಸಂಜೆ ಪ್ರಕಟಿಸಲಿದ್ದೇವೆ.ಈ ಚಿಂತನ ಸಭೆಯಲ್ಲಿ ವ್ಯಕ್ತವಾದ ಮಾಹಿತಿಗಳನ್ನು ಆಧಾರಿಸಿ, ಮುಂಬರುವ 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಾಣಾಳಿಕೆಗಳು ಸಿದ್ದಗೊಳ್ಳಲಿವೆ ಎಂದರು.
ನಡೆದ ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನದಂತೆ ಆರು ಪ್ರಮುಖ ವಿಚಾರಗಳ ಕುರಿತು ಪ್ರತ್ಯೇಕ ತಲಾ 100 ಜನ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಅರ್ಥಿಕ ವ್ಯವಹಾರ ಮತ್ತು ಬೆಲೆ ಹೆಚ್ಚಳ,ಪಕ್ಷ ಸಂಘಟನೆಗೆ ಕುರಿತಂತೆ ಕುಣಿಗಲ್ ಶಾಸಕ ಹೆಚ್.ಡಿ.ರಂಗನಾಥ ಅಧ್ಯಕ್ಷತೆಯಲ್ಲಿ, ಜಿಲ್ಲಾ ರೈತರ ಸಮಸ್ಯೆಗಳು ಮತ್ತು ಕೃಷಿ ಸಮಿತಿಗೆ ಮಾಜಿ ಶಾಸಕ ಕೆ.ಷಡಕ್ಷರಿ,ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿಗೆ ಜಿ.ಪಂ.ಸದಸ್ಯ ವಿ.ವೆಂಕಟೇಶ್,ಯುವ ಮತ್ತು ಮಹಿಳಾ ಸಬಲೀಕರಣ ಕುರಿತ ಸಮಿತಿಗೆ ಬೆಮೆಲ್ ಕಾಂತರಾಜು ಹಾಗೂ ರಾಜಕೀಯ ಸಂಬಂಧ ಸಮಿತಿಗೆ ಡಾ.ರಫೀಕ್ ಅಹಮದ್ ಅವರುಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಜೂನ್ 26ರ ಬೆಳಗ್ಗೆ 8 ಗಂಟೆಗೆ ಸದಸ್ಯರ ನೊಂದಣಿಯೊಂದಿಗೆ ನವ ಚೈತನ್ಯ ಚಿಂತನಾ ಶಿಬಿರ ಆರಂಭಗೊಳ್ಳಲಿದೆ. 9;30ಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಗೂ ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರುಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಸಮಿತಿಗಳ ಅಧ್ಯಕ್ಷರುಗಳ ನೇತೃತ್ವದಲ್ಲಿ ಗುಂಪು ಚರ್ಚೆಗಳನ್ನು ನಡೆಸಿ, ಅಲ್ಲಿ ತೆಗೆದುಕೊಂಡು ತೀರ್ಮಾನಗಳನ್ನು ಸಭೆಯ ಮುಂದಿಡುವ ಕೆಲಸ ನಡೆಯುತ್ತದೆ ಎಂದು ರಮೇಶ್ ವಿವರಣೆ ನೀಡಿದರು.
ಕುಣಿಗಲ್ ಕ್ಷೇತ್ರ ಶಾಸಕ ಡಾ.ಹೆಚ್.ಡಿ.ರಂಗನಾಥ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾದ ಸಾರ್ವಜನಿಕರನ್ನು ಒಳಗೊಳ್ಳದ ಯಾವುದೇ ಚಿಂತನೆಗಳ ಅಪ್ರಸ್ತುತ. ಈ ಹಿನ್ನೆಲೆಯಲ್ಲಿ ರೈತರು, ಮಹಿಳೆಯರು, ಯುವಜನತೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿರುವ ಸಂಘ ಸಂಸ್ಥೆಗಳು, ರೈತ ಸಂಘದ ಮುಖಂಡರು ಹಾಗೂ ಯುವ ಜನರನ್ನು ಕಾಂಗ್ರೆಸ್ ಪಕ್ಷದ ನವ ಚೈತನ್ಯ ಚಿಂತನಾ ಶಿಬಿರದ ಸಭೆಗೆ ಆಹ್ವಾನಿಸಿದ್ದೇವೆ. ಅವರಿಂದಲೂ ಬರುವ ಸಲಹೆ, ಸೂಚನೆಗಳನ್ನು ಆಲಿಸಿ, ಸೂಕ್ತವಾದವುಗಳನ್ನು ಸೇರಿಸಿ, ಒಂದು ಉತ್ತಮ ಆಶಯ ಹೊಂದಿದ ಚುನಾವಣಾ ಪ್ರಾಮಾಣಿಕ ತಯಾರಿಸುವುದು, ಆ ಮೂಲಕ ಜನರನ್ನು ನೇರವಾಗಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಒಳಗೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಇಂದು ಜನತೆ ಬೆಲೆ ಹೆಚ್ಚಳ,ತೆರಿಗೆ ಹೆಚ್ಚಳ,ಕೋಮು ಗಲಭೆ, ಧಾರ್ಮಿಕ ಅಸಹಿಷ್ಣತೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತಿದ್ದಾರೆ.ಆದರೆ ಕೆಲವು ಭಾವನಾತ್ಮಕ ವಿಚಾರಗಳನ್ನು ಮಾತನಾಡದಂತಹ ಸ್ಥಿತಿ ಉಂಟಾಗಿದೆ. ಈ ಎಲ್ಲಾ ವಿಚಾರಗಳ ಕುರಿತು ವಿವಿಧ ಉಪಸಮಿತಿಗಳನ್ನು ಚರ್ಚೆ ನಡಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇದಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಡಾ.ರಫೀಕ್ ಅಹಮದ್, ಜಿ.ಪಂ.ಸದಸ್ಯರಾದ ವಿ.ವೆಂಕಟೇಶ್, ಕೆಂಚಮಾರಯ್ಯ, ಮುಖಂಡರರಾದ ಪ್ರಸನ್ನಕುಮಾರ್, ಕೆಪಿಸಿಸಿ ವೀಕ್ಷಕರಾದ ಕೇಶವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.