ತುಮಕೂರು:
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಅಗ್ನಿಪಥ್ ಯೋಜನೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕೂಡಲೇ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿದ ಮಾತನಾಡಿದ ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಆರ್. ರಾಮಕೃಷ್ಣ, ಕೇಂದ್ರದ ಬಿಜೆಪಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ಅಡ್ಡಾದಿಡ್ಡಿ ಬೆಲೆಗೆ ಅವರಿಗೆ ಬೇಕಾದವರಿಗೆ ಮಾರಾಟ ಮಾಡುತ್ತಿದೆ. ದೇಶದ ಗಡಿಯಲ್ಲಿ ಕೆಲಸ ಮಾಡುವ ಸೈನಿಕರನ್ನು 4 ವರ್ಷ ಕೆಲಸ ಮಾಡಿ ಮನೆಗೆ ಹೋಗಿ ಎಂದರೆ ಏನರ್ಥ. ಇವರು ಬೇಕಾದರೆ 4 ವರ್ಷ ಕೆಲಸ ಮಾಡಿ ಮನೆಗೆ ಹೋಗಲಿ ಎಂದು ಆಕ್ರೋಶ ಹೊರ ಹಾಕಿದರು. ಬಿಜೆಪಿಯವರಿಗೆ ಉನ್ನತ ಹುದ್ದೆಗಳು ಬೇಕು, ಸವಲತ್ತುಗಳು ಬೇಕು. ಆದರೆ ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೆ ಬೇಡವೇ ಎಂದು ಪ್ರಶ್ನಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರಿಗೆ ದೇಶದ ಜನತೆ ತಕ್ಕಪಾಠ ಕಲಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಸೈನಿಕರ ಪರವಾಗಿ ದೇಶಾದ್ಯಂತ ಹೋರಾಟ ಮಾಡುತ್ತಿದೆ. ಕೂಡಲೇ ಅಗ್ನಿಪಥ್ ಯೋಜನೆಯ ಆದೇಶವನ್ನು ಹಿಂಪಡೆಯಲೇಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡ ಮುರುಳೀಧರ ಹಾಲಪ್ಪ ಮಾತನಾಡಿ, ಅಗ್ನಿಪಥ್ ಯೋಜನೆಯನ್ನು ಬಿಜೆಪಿ ಕಾರ್ಯಾಲಯದಲ್ಲೇ ಇಟ್ಟುಕೊಳ್ಳಬೇಕು. ದೇಶದ ನಾಗರಿಕರು ಈ ಯೋಜನೆಯನ್ನು ಖಂಡಿಸುತ್ತಿದ್ದಾರೆ. ಈ ಭಾಗದಲ್ಲೂ ಅದಕ್ಕೆ ಅವಕಾಶ ಕಲ್ಪಿಸಲು ಬಿಡುವುದಿಲ್ಲ. ರೈತರ ಕಾಯ್ದೆ ವಾಪಸ್ ಪಡೆದಂತೆ ಈ ಕಾಯ್ದೆಯನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದರು.
ನಮ್ಮ ಮಕ್ಕಳು ಸೆಕ್ಯೂರಿಟಿ ಕೆಲಸ ಮಾಡಲು ಹೋಗಬೇಕು, ಬಿಜೆಪಿಯವರ ಮಕ್ಕಳು ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ದೇಶ ಬಿಟ್ಟು ಪಲಾಯನ ಮಾಡಬಹುದು. ಇದು ನಮ್ಮ ಕಣ್ಮುಂದೆ ಇರುವ ವ್ಯವಸ್ಥೆಯಾಗಿದೆ. ರಕ್ಷಣಾ ವ್ಯವಸ್ಥೆಯನ್ನು ಸಹ ಈಗ ವ್ಯವಸ್ಥಿತವಾಗಿ ಮಾರಾಟಕ್ಕೆ ಇಟ್ಟಿದ್ದಾರೆ. ಇದು ಖಂಡನೀಯ ಎಂದರು.
ನಮ್ಮ ಜಿಲ್ಲೆಯ 1700ಕ್ಕಿಂತಲೂ ಹೆಚ್ಚು ಜನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೇನೆಯಲ್ಲಿ ತಾತ್ಕಾಲಿಕ ಸೇವೆ ಬೇಡ, ಖಾಯಂ ಸೇವೆ ಮಾತ್ರ ಬೇಕು. ಆದ್ದರಿಂದ ಈ ಅಗ್ನಿಪಥ್ ಯೋಜನೆ ರದ್ದುಪಡಿಸಲೇಬೇಕು ಎಂದು ಆಗ್ರಹಿಸಿದರು. ರಕ್ಷಣಾ ವ್ಯವಸ್ಥೆ ದಿನೇ ದಿನೇ ಗಟ್ಟಿಯಾಗುವ ಬದಲು ತಾತ್ಕಾಲಿಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಲುವಾಗಿ ಅಗ್ನಿಪಥ್ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯನ್ನು ವಾಪಸ್ ಪಡೆಯುವ ಸಲುವಾಗಿ ಚಳವಳಿಯನ್ನು ನಡೆಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ವಾಪಸ್ ಪಡೆಯಲೇಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ನಯಾಜ್ ಅಹಮದ್, ತರುಣೇಶ್, ಹೆಚ್.ಸಿ. ಹನುಮಂತಯ್ಯ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.