ತುಮಕೂರು
ದೂರದೃಷ್ಟಿ ಮತ್ತು ನಾಡ ಪ್ರೇಮದಿಂದ ಬೆಂಗಳೂರನ್ನು ಕಟ್ಟಿದ ಹೆಮ್ಮೆಯ ಕನ್ನಡಿಗ ನಾಡಪ್ರಭು ಕೆಂಪೇಗೌಡರ ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಹಾಗೂ ಅವರ ಕುಟುಂಬ ಸಾಕಷ್ಟು ವರ್ಷಗಳು ಶ್ರಮಿಸಿ ತಮ್ಮ ಕನಸಿನ ರಾಜಧಾನಿ ಬೆಂಗಳೂರು ಸಾಮಾನ್ಯ ಜನರಿಗೆ ಆಸರೆಯಾಗಿರಲೆಂದು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳೊಂದಿಗೆ ಕಟ್ಟಿಕೊಟ್ಟವರು ಎಂದರು. ಬೆಂಗಳೂರು ವಿಶಾಲವಾಗಿ ಬೆಳೆಯಬೇಕು. ಎಲ್ಲ ವರ್ಗದವರು ಒಗ್ಗಟ್ಟಿನಿಂದ ಬಾಳಬೇಕೆಂಬ ಆಶಯದಿಂದ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿ ಬೆಳೆಸಿದರು. ರೈತರ ಬೆನ್ನೆಲುಬಾಗಿ ಕೆರೆಗಳನ್ನು ಕಟ್ಟಿದ ಶಕ್ತಿ ಕೆಂಪೇಗೌಡರದು. ಹಲವಾರು ದೇವಾಲಯಗಳು, ಮಹಾದ್ವಾರಗಳು, ಶಾಲೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ಮಾತನಾಡಿ, ಸುಮಾರು 560 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವುದರ ಮೂಲಕ ಎಲ್ಲಾ ಜನಾಂಗದವರಿಗೂ ಸಹ ಒಂದೊಂದು ಬೀದಿಗಳನ್ನು ನಿರ್ಮಿಸಿದ್ದಾರೆ. ದೈವಭಕ್ತರಾಗಿದ್ದ ಅವರು ಸುಮಾರು 130 ದೇವಾಲಯಗಳನ್ನು ನಿರ್ಮಿಸಿದ್ದಾರೆ ಎಂದರು. ಕೆಂಪೇಗೌಡರು ಒಂದು ಜಾತಿ, ಊರಿಗೆ ಸೀಮಿತವಾಗಿಲ್ಲ. ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಜನಪರ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಿದ ಕೆಂಪೇಗೌಡರು ಕರ್ನಾಟಕವನ್ನು ವಿಶ್ವದಾದ್ಯಂತ ಗುರುತಿಸುವಂತೆ ಮಾಡಿದ್ದಾರೆ ಎಂದು ಹೇಳಿದರು. ಚರಿತ್ರೆ ಓದಿದವರು ಚರಿತ್ರೆ ನಿರ್ಮಾಣ ಮಾಡಬೇಕು ಎಂಬ ಸಂದೇಶ ನೀಡುವ ಸಲುವಾಗಿ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುತ್ತಿದೆ. ಐನೂರು ವರ್ಷಗಳ ಹಿಂದೆ ದೂರದೃಷ್ಠಿಯನ್ನಿಟ್ಟುಕೊಂಡು ಬೆಂಗಳೂರಿಗೆ ಕಾಯಕಲ್ಪ ನೀಡಿರುವ ಕೆಂಪೇಗೌಡರ ಚಿಂತನೆ ಇಂದಿಗೂ ಪೂರಕವಾಗಿದೆ ಎಂದರು.