ತುಮಕೂರು:
ಅಕ್ಷರ ಮತ್ತು ಆರ್ಥಿಕತೆಯಿಂದ ದೂರವೇ ಉಳಿದಿದ್ದ ದಲಿತ ಸಮುದಾಯದ ಸಬಲೀಕರಣಕ್ಕೆ ಸ್ವಾತಂತ್ರ ನಂತರದಲ್ಲಿ ಸರಕಾರಗಳು ಹಲವಾರು ಯೋಜನೆಗಳನ್ನು ಹಾಕಿಕೊಂಡಿವೆ. ಇವುಗಳ ಫಲವಾಗಿ ಅಕ್ಷರ ಮತ್ತು ಆರ್ಥಿಕ ವಿಚಾರದಲ್ಲಿ ದಲಿತ ಸಮುದಾಯಗಳು ಕ್ರಾಂತಿಯನ್ನೇ ಮಾಡಿವೆ ಎಂದು ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಶ್ರೀಬಸವೇಶ್ವರ ಸಹಕಾರ ಸಂಘ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಬಹಳ ಕಾಲ ಅಕ್ಷರ ವಂಚಿತರಾಗಿ, ಆರ್ಥಿಕತೆಯ ಅರಿವೆ ಇಲ್ಲದ ಜನರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಗಳು ಪ್ರವಾಹದ ವಿರುದ್ದ ಈಜಿ ಈ ದೇಶದ ದಲಿತರು ಸ್ವಾಭಿಮಾನದ ಬದುಕು ಕಟ್ಟಿಕೊಡಲು ಶ್ರಮಿಸಿದ್ದಾರೆ ಎಂದರು.
ಮಹನೀಯರ ಹೇಳಿದ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ ನಾವುಗಳ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕೆಂದರು. ಸಹಕಾರ ಸಂಘವೆಂಬುದು ಒಂದು ಟೀಮ್ ವರ್ಕ್.ಪರಸ್ವರ ಸಹಕಾರದಿಂದ ಒಂದು ಅರ್ಥಿಕ ಸಂಸ್ಥೆ ಬೆಳೆಯಲು ಸಾಧ್ಯ, ಎಲ್ಲಾ ರಂಗದಲ್ಲಿಯೂ ಒಳ್ಳೆಯದು ಇದೆ,ಕೆಟ್ಟದ್ದು ಇದೆ.ಅವುಗಳಲ್ಲಿ ಬದಲಾವಣೆಗಳನ್ನು ತಂದುಕೊಂಡು ಉತ್ತಮ ರೀತಿಯಲ್ಲಿ ಸಂಘವನ್ನು ಬೆಳೆಸಲಿಎಂದು ಸಂಘದ ಅಧ್ಯಕ್ಷರಾದ ವೈ.ಹೆಚ್.ಹುಚ್ಚಯ್ಯ ಅವರಿಗೆ ಹಿರೇಮಠದ ಶ್ರೀಗಳು ಸಲಹೆ ನೀಡಿದರು.
ಶ್ರೀ ಬಸವೇಶ್ವರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಒಂದು ಸಹಕಾರ ಸಂಘ ಹೆಮ್ಮೆರವಾಗಿ ಬೆಳೆಯಬೇಕೆಂದರೆ ತನ್ನ ಪ್ರತಿಯೊಬ್ಬ ಸದಸ್ಯರನ್ನು ಬಸವಣ್ಣನವರ ವಚನದಂತೆ ಇವ ನಮ್ಮವ ಎಂಬ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಾಧ್ಯ. ಸಹಕಾರ ಸಂಘವೆಂಬುದು ಒಂದು ಮನೆ ಇದ್ದಂತೆ,ಒಬ್ಬರಿಗೊಬ್ಬರು ಸಹಕಾರ ದಿಂದ ಇರಬೇಕು ಎಂದರು.