ತುಮಕೂರು:
ನಗರದ ಎಂ.ಜಿ.ರಸ್ತೆಯ ಬಾಲಭವನದ ಆವರಣದಲ್ಲಿರುವ ಶ್ರೀ ಕೃಷ್ಣ ರಾಜೇಂದ್ರ ಬಾಲಕಿಯರ ಪ್ರಾಥಮಿಕ ಶಾಲೆಗೆ ಸೇರಿದ 4.0 ಎಕರೆ ಜಾಗದ ಸರ್ವೆ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಇಲಾಖೆ ಇಲಾಖೆ ನಡುವೆ ಏರ್ಪಟ್ಟಿರುವ ವಿವಾದ ಬಗೆಹರಿಸಲು ಸರ್ವೆಗೆ ಮುಂದಾದ ಪಾಲಿಕೆಯ ಕಂದಾಯ ಅಧಿಕಾರಿಗಳಿಗೆ ಅಡ್ಡಿಪಡಿಸಿರುವ ಘಟನೆ ನಡೆದಿದೆ.
1946ರಲ್ಲಿ ಅಂದಿನ ಮೈಸೂರು ಸಂಸ್ಥಾನದ ರಾಜರಾದ ಶ್ರೀನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು, ಕೃಷ್ಣರಾಜೇಂದ್ರ ಬಾಲಕಿಯರ ಪಾಠ ಶಾಲೆಗಾಗಿ 4.20 ಜಾಗವನ್ನು ನೀಡಿದ್ದು, 2002ರವರೆಗೆ ಸದರಿ ಜಾಗ ಶಾಲೆಯ ಹೆಸರಿನಲ್ಲಿಯೇ ಇದೆ. ಆದರೆ 2002ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಾಲಭವನ ನಿರ್ಮಾಣಕ್ಕಾಗಿ ಸರಕಾರ ಸದರಿ ಜಾಗದಲ್ಲಿ 3.14 ಗುಂಟೆಯನ್ನು ಖಾತೆ ಮಾಡಿಕೊಟ್ಟಿದ್ದು,ಸದರಿ ಜಾಗದಲ್ಲಿ ಬಾಲಭವನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿವೆ.
ಆದರೆ ಪ್ರಸ್ತುತ 3.14 ಗುಂಟೆಯಲ್ಲಿ ಕಟ್ಟಡ ಕಟ್ಟಿ ಉಳಿದಿರುವ ಜಾಗದಲ್ಲಿ ಈಜುಕೊಳ ನಿರ್ಮಾಣಕ್ಕೆ ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಶಾಲೆಯ ಜಾಗದಲ್ಲಿ ಈಜುಕೊಳ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಲೆಯ ಆಡಳಿತ ಮಂಡಳಿ ತರಕಾರು ತೆಗೆದಿದ್ದು,ಈ ಸಂಬಂಧ ತುಮಕೂರು ಬಿಇಓ ಸಲ್ಲಿಸಿದ ದೂರಿನ ಮೇರೆಗೆ ಇಂದು ಸ್ಥಳ ಆಳತೆ ಮಾಡಲು ಪಾಲಿಕೆಯ ಅಧಿಕಾರಿಗಳ ಆಗಮಿಸಿದ್ದ ವೇಳೆ ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮುಖಿ ನಡೆದಿದ್ದು, ಜಂಟಿ ಸರ್ವೆಗೆ ದಿನಾಂಕ ನಿಗಧಿ ಪಡಿಸಲು ಪಾಲಿಕೆ ಅಧಿಕಾರಿಗಳು ಸೂಚಿಸಿ, ಸರ್ವೆಯನ್ನು ಸ್ಥಗಿತಗೊಳಿಸಿದ್ದಾರೆ.
ಈ ಕುರಿತು ಮಾತನಾಡಿದ ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್,2002ರವರೆಗೆ ಪಾಲಿಕೆಯ ದಾಖಲೆಗಳಲ್ಲಿ ಕೃಷ್ಣರಾಜೇಂದ್ರ ಬಾಲಕಿಯರ ಪಾಠಶಾಲೆಯ ಹೆಸರಿಗೆ ಇದ್ದ ಖಾತೆಯನ್ನು ಏಕಾಎಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬದಲಾಯಿಸಲಾಗಿದೆ.ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಳಿಯಾಗಲಿ, ನಗರಪಾಲಿಕೆಯ ಬಳಿಯಾಗಲಿ ಸಮರ್ಪಕ ದಾಖಲೆಗಳಿಲ್ಲ.ಅಲ್ಲದೆ ಸದರಿ ಜಾಗದ ವಿಚಾರವಾಗಿ ಪಾಲಿಕೆ ಮತ್ತು ಗಣಪತಿ ಪ್ರತಿಷ್ಠಾಪನಾ ಸಮಿತಿ ನಡುವೆ ಇದ್ದ ಓಸ್21/2004 ಪ್ರಕರಣದ ತೀರ್ಪು ಬರುವ ಮುನ್ನವೇ ಹಳೆಯ ಸರಕಾರಿ ದಾಖಲೆ ತೋರಿಸಿ, ಇಲಾಖೆಯ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ಇದು ತಪ್ಪು ಎಂದರು.
ಸದರಿ ಶಾಲೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದು, ಅವರಿಗೆ ಆಟವಾಡಲು ಜಾಗವಿಲ್ಲ.ಇರುವ ಜಾಗದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈಜುಕೊಳ, ವಿವಿದೋದ್ದೇಶ ವಾಣಿಜ್ಯ ಸಂಕೀರ್ಣ ಕಟ್ಟಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ.ಮಕ್ಕಳಿಗೆ ಆಟವಾಡಲು ಜಾಗವಿಲ್ಲದೆ ಪರದಾಡುತಿದ್ದರೆ, ಇವರು ಈಜುಕೊಳ ಕಟ್ಟಿ ಮೋಜು ಮಾಡಲು ಹೊರಟಿದ್ದಾರೆ.ಯಾವುದೇ ಕಾರಣಕ್ಕು ಈಜುಕೊಳ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಮಾತನಾಡಿ, ನಮಗೆ 1981-82ರಲ್ಲಿ ಆದ ಇಲಾಖೆಯ ಆದೇಶದಂತೆ 2002ರಲ್ಲಿ ಖಾತೆ ಮಾಡಿಕೊಟ್ಟಿದ್ದಾರೆ. ಸದರಿ ಜಾಗದಲ್ಲಿ ನಾವು ಮಕ್ಕಳು ಮತ್ತು ಮಹಿಳೆಯರಿಗಾಗಿ ಈಜಕೊಳ ನಿರ್ಮಿಸಲು ಮುಂದಾಗಿದ್ದೇವೆ.ಅಲ್ಲದೆ ಯಾವುದೇ ಜಾಗದ ಸರ್ವೆಗೆ ಬರುವ ಮುನ್ನ ನೊಟೀಷ್ ನೀಡಬೇಕು. ನಮಗೆ ಯಾವುದೇ ನೊಟಿಷ್ ನೀಡದ ಕಾರಣ ಸರ್ವೆ ಕೆಲಸ ಸ್ಥಗಿತಕ್ಕೆ ಒತ್ತಾಯಿಸಿದ್ದೇವೆ. ಪಾಲಿಕೆಯವರು ಒಪ್ಪಿಕೊಂಡಿದ್ದಾರೆ. ಜಂಟಿ ಸರ್ವೆಯಲ್ಲಿ ನಾವು ಬದ್ದರಿದ್ದೇವೆ ಎಂದರು. ಈ ವೇಳೆ ಕೃಷ್ಣರಾಜೇಂದ್ರ ಪ್ರಾಥಮಿಕ ಬಾಲಕಿಯರ ಪಾಠಶಾಲೆಯ ಎಸ್.ಡಿ.ಎಂ.ಸಿ ಸದಸ್ಯ ನವೀನ್, ಉಪಸ್ಥಿತರಿದ್ದರು.