ಶಿರಾ:
ನೇರಲಗುಡ್ಡ ಗ್ರಾಪಂ ವ್ಯಾಪ್ತಿಯ ಗಾಮನಗುಡ್ಡ ಪ್ರದೇಶದಲ್ಲಿ ಜಲಸಂಗ್ರಹಗಾರ ನಿರ್ಮಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಬುಕ್ಕಾಪಟ್ಟಣದಲ್ಲಿ ಬುಧವಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ, ಶ್ರೀಗಂಧ ಬೆಳೆಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಜಲಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೋಬಳಿಯ ಇತರೆ ಕೆರೆಕಟ್ಟೆಗಳನ್ನು ನದಿ ನೀರಿನಿಂದ ತುಂಬಿಸುವುದಾಗಿ ತಿಳಿಸಿ, ಮರಡಿಗುಡ್ಡದ ಬಳಿ ಇರುವ ಪುರಸಕ್ಕನಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವುದು ಅವಶ್ಯವಾಗಿದ್ದು ಈ ಭಾಗದ ರೈತರಿಗೆ ಉಪಯೋಗವಾಗಲಿದೆ, ಜಲಸಂಗ್ರಹಗಾರ ನಿರ್ಮಿಸಲು ಸಂಬಂಧಪಟ್ಟ ಇಲಾಖೆಯ ಅಭಿಯಂತರರಿಗೆ ಸರ್ವೆ ಮಾಡುವ ಕಾರ್ಯಕ್ಕೆ ಶೀಘ್ರ ಚಾಲನೆ ದೊರೆಯಲಿದೆ ಎಂದರು.
ಈಗಾಗಲೇ ಹೇಮಾವತಿ ಯೋಜನೆಯಿಂದ ಕಳ್ಳಂಬೆಳ್ಳ, ಶಿರಾ ಹಾಗೂ ಇತರೆ 11 ಕೆರೆಗಳಿಗೆ ನೀರು ಸರಬರಾಜು ಆಗಿರುವುದರಿಂದ ಪುನಃ ಭದ್ರಾ ಮೇಲ್ದಂಡೆ ಯೋಜನೆಯಿಂದ ಆ ಭಾಗಕ್ಕೆ ನೀರು ಹರಿಸುವ ಬದಲು ಇದುವರೆಗೂ ನದಿ ಯೋಜನೆಗೆ ಒಳಪಡದೇ ಇರುವ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿ ಹಾಗೂ ಬುಕ್ಕಾಪಟ್ಟಣ ಹೋಬಳಿಗೆ ಪ್ರಧಾನವಾಗಿ ನೀರು ಹರಿಸುವುದು ಅವಶ್ಯಕ ಎಂದರು.
ಅಭಿವೃದ್ಧಿ ರೆವೆಲ್ಯೂಷನ್ ಪೆÇೀರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮಾತನಾಡಿ, `ಊರಿಗೊಂದು ಕೆರೆ, ಕೆರೆಗೊಂದು ನದಿ ನೀರಿನ ಯೋಜನೆ’ ಎಂಬಂತೆ ಎಲ್ಲಾ ಕೆರೆಗಳಿಗೂ ನೀರು ಹರಿಸಿ ರೈತಬಾಂಧವರಿಗೆ ಅನುಕೂಲ ಮಾಡಿಕೊಡಬೇಕಿದೆ, ಅಂತರ್ಜಲ ವೃದ್ಧಿಸಲು ರೈತರು ಜಮೀನುಗಳಲ್ಲಿ ಮಳೆ ನೀರು ಶೇಖರಣೆಗಾಗಿ ತಲಪುರುಕೆ ನಿರ್ಮಿಸಿಕೊಳ್ಳಲು ಮುಂದಾಗಲಿ ಎಂದರು.
ಪ್ರಗತಿಪರ ರೈತ ಡಾ.ಸಿದ್ಧಗಂಗಯ್ಯ ಹೊಲತಾಳು ಮಾತನಾಡಿ, ತಮ್ಮ ಜಮೀನಿನಲ್ಲಿ ಮಳೆ ನೀರು ಶೇಖರಣೆಯಾಗಲು ತನ್ನ ಸ್ವಂತ ಖರ್ಚಿನಿಂದಲೇ 50 ತಲಪುರುಕೆಗಳನ್ನು ನಿರ್ಮಿಸಿದ್ದು, ಇದರ ಪರಿಣಾಮ ಸಮೀಪದ ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ಕೃಷಿ ಕಾರ್ಯಗಳಿಗೆ ಅನುಕೂಲವಾಗಿದೆ ಎಂದರು.
ಸಾಮಾಜಿಕ ಹೋರಾಟಗಾರ ಆರ್.ವಿ.ಪುಟ್ಟಕಾಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನದಿ ನೀರು ಯೋಜನೆ ಸಮರ್ಪಕವಾಗಿ ಬಳಕೆಯಾಗಲು ಮಾಸ್ಟರ್‍ಪ್ಲಾನ್ ಪ್ರಕಾರ ಯೋಜನೆ ಮುಂದುವರೆಸಬೇಕು, ನೀರು ದೊರಕದೆ ಇರುವ ಬುಕ್ಕಾಪಟ್ಟಣ, ಹುಲಿಕುಂಟೆ, ಗೌಡಗೆರೆ ಹೋಬಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಕಾರ್ಯಗತಗೊಳಿಸಬೇಕು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸೌಭಾಗ್ಯಮ್ಮ, ಕಳ್ಳಂಬೆಳ್ಳ ಹೆಂಜಾರಪ್ಪ, ನೇರಲಗುಡ್ಡದ ತಿಮ್ಮಯ್ಯ, ಮಾದೇನಹಳ್ಳಿ ಇಂಜಿನಿಯರ್ ಎಂ.ಆರ್.ರಂಗನಾಥ್, ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ರಘುರಾವ್, ಗೋಪಾಲದೇವರಹಳ್ಳಿ ಜಿ.ಎಂ.ರಂಗನಾಥ್‍ಗೌಡ್ರು ಇತರರು ಇದ್ದರು.