ತುಮಕೂರು:
ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ಹಿಂದೂ ಟೈಲರ್ ಕನ್ನಯ್ಯಲಾಲ್ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಹಾಗೂ ಇಬ್ಬರು ಕೊಲೆಗಾರರನ್ನು ಶೀಘ್ರ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಕನ್ನಯ್ಯಲಾಲ್ ಶಿರಚ್ಛೇದ ಮಾಡಿರುವ ಮಹಮ್ಮದ್ ರಿಯಾಜ್ ಹಾಗೂ ಮಹಮಗ್ ಗೌಸ್ ಎಂಬುವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿದ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗಳದ ಮಂಜು ಭಾರ್ಗವ್, ರಾಜಸ್ಥಾನದ ಉದಯಪುರದ ಕನ್ನಯ್ಯಲಾಲ್ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿರುವ ಈ ಇಬ್ಬರು ಹಂತಕರು ಬಟ್ಟೆ ಅಳತೆ ಕೊಡುವ ನಾಟಕವಾಡಿ ತಮ್ಮ ಸೊಂಟದಲ್ಲಿ ಇಟ್ಟುಕೊಂಡಿದ್ದ ಕತ್ತಿಯನ್ನು ತೆಗೆದು ಅಮಾನುಷವಾಗಿ ಕನ್ನಯ್ಯಲಾಲ್ ಕತ್ತಿಗೆ ಇರಿದು ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಕನ್ನಯ್ಯಲಾಲ್ ಕೊಲೆ ಮಾಡಿದ ಮುಸ್ಲಿಂ ಜಿಹಾದಿಗಳು ಮತ್ತೆ ವಿಡಿಯೋ ಮಾಡಿ ಪ್ರವಾದಿ ಮೊಹಮ್ಮದ್ ಪರವಾಗಿ ಕೊಲೆ ಮಾಡಿದ್ದೀವಿ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಈ ಕೊಲೆ ಹಂತಕರನ್ನು ಗಲ್ಲು ಶಿಕ್ಷೆ ಗುರಿಪಡಿಸಬೇಕು. ದೇಶದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂತಹ ಭಯೋತ್ಪಾದಕರಿಗೆ ಬಿಸಿ ಮುಟ್ಟಿಸಬೇಕು ಎಂದು ಆಗ್ರಹಿಸಿದರು.
ಇಂತಹ ಕೃತ್ಯವೆಸಗುತ್ತಿರುವವರಿಗೆ ಶಿಕ್ಷಣ ನೀಡುತ್ತಿರುವುದು ಮದರಸಾಗಳಲ್ಲಿ. ಹಾಗಾಗಿ ಇಡೀ ದೇಶಾದ್ಯಂತ ಮದರಸಾಗಳನ್ನು ಬಂದ್ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಕೊಲೆ ಹಂತಕರಿಗೆ ಆಶ್ರಯ ನೀಡಿರುವ ವ್ಯಕ್ತಿಗಳು ಮತ್ತು ಸಂಘಟನೆ ಬಗ್ಗೆ ಎನ್‍ಐಎ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ವಿಷ್ಣುವರ್ಧನ್, ವಿಹೆಚ್‍ಪಿ ಕಾರ್ಯಕರ್ತರಾದ ಬೆಳ್ಳಾವಿ ಮಹೇಶ್, ತರುಣ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.