ತುಮಕೂರು:
ಕಠಿಣ ಶ್ರಮ ಮತ್ತು ಆತ್ಮವಿಶ್ವಾಸದಿಂದ ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿ ರೋಗಿಗೆ ಪುನರ್ಜನ್ಮ ನೀಡುವ ವೈದ್ಯರು ದೇವರಿಗೆ ಸಮಾನ ಎಂದು ವರದರಾಜ ಚಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥ ಡಾ. ದುರ್ಗಾದಾಸ್ ಆಸ್ರಣ್ಣ ಅಭಿಪ್ರಾಯಪಟ್ಟರು.
ವೈದ್ಯರ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ವರದರಾಜ ಚಾರಿಟೆಬಲ್ ಟ್ರಸ್ಟ್‍ನ ವರದರಾಜ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಕಸ್ತೂರ್ ಬಾ ಆಸ್ಪತ್ರೆ ವತಿಯಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೋಗಿಗಳ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಮಾಜದಲ್ಲಿ ವೈದ್ಯರಿಗೆ ಬೆಲೆ ಸಿಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮೊದಲು ರೋಗಿಗಳ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ ಜನರ ಜೀವವನ್ನು ಉಳಿಸುವ ವೈದ್ಯರಿಗಾಗಿ ಪ್ರತ್ಯೇಕ ದಿನಾಚರಣೆಯನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರ.
ಕಲ್ಪತರು ನಾಡು, ಶಾರದೆಯ ಬೀಡಾದ ತುಮಕೂರಿನಲ್ಲಿ ಕ್ಯಾನ್ಸರ್ ರೋಗ ಸೇರಿದಂತೆ ಮಾರಣಾಂತಿಕ ಖಾಯಿಲೆಗಳಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸಲು ಸರ್ಕಾರ ಹಲವಾರು ಹೊಸ ಕಾರ್ಯಕ್ರಮಗಳನ್ನು ರೂಪಸಿದೆ.
ವೈದ್ಯರು ವಾಣಿಜ್ಯೋದ್ದೇಶಕ್ಕಾಗಿ ಆರೋಗ್ಯ ಸೇವೆ ನೀಡದೇ ಜನರ ಆರೋಗ್ಯ ದೃಷ್ಟಿಯಿಂದ ಸೇವೆ ನೀಡವ ಮನೋಭಾವ ಹೊಂದಬೇಕು ಎಂದರಲ್ಲದೆ ಪಾಲಿಕೆ ವತಿಯಿಂದ ವೈದ್ಯರಿಗೆ ದಿನಾಚರಣೆಯ ಶುಭಾಷಯ ಕೋರಿದರು.
ವರದರಾಜ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಭೀಮಾಚಾರ್ ಪ್ರಸ್ತಾವಿಕವಾಗಿ ಮಾತನಾಡಿ ಕಳೆದೆರಡು ವರ್ಷದಲ್ಲಿ ಕೊರೋನಾ ಮಹಾಮಾರಿಯನ್ನು ಹೊಡಿದೋಡಿಸುವಲ್ಲಿ ವೈದ್ಯರ ಶ್ರಮ ಶ್ಲಾಘನೀಯವಾದುದು.
ಕೋವಿಡ್ ಸೋಂಕಿತರನ್ನು ಗುಣಪಡಿಸಿ ಹಲವಾರು ಕುಟುಂಬಗಳ ಆಧಾರಸ್ಥಂಬಗಳನ್ನು ಉಳಿಸಿದ ಕೀರ್ತಿ ವೈದ್ಯರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ವೈದ್ಯರ ದಿನಾಚರಣೆ ಪ್ರಯುಕ್ತ ನರ್ಸಿಂಗ್ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವ್ಯಾಯಾಮದಿಂದಾಗುವ ಪ್ರಯೋಜನಗಳು, ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು, ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಪಡಿಸಿಕೊಳ್ಳುವ ಹಾಗೂ ಮತ್ತಿತರ ಆರೋಗ್ಯ ಸುರಕ್ಷತಾ ಕ್ರಮಗಳ ಬಗ್ಗೆ ಫಲಕಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ರಮೇಶ್, ಮಂಜುಳ ಆದರ್ಶ್, ನಾಗರತ್ನಮ್ಮ, ವರದರಾಜ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಮದನ್ ಪ್ರಸಾದ್, ವರದರಾಜ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಭೀಮಾಚಾರ್, ವರದರಾಜ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ರಘು, ಮತ್ತಿತರರು ಹಾಜರಿದ್ದರು. ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿದರು.