ತುಮಕೂರು:
75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ 2022-23ನೇ ಸಾಲಿನ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯ ಪ್ರಚಾರಾಂದೋಲನಕ್ಕೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಜುಲೈ 1 ರಿಂದ 7ರವರೆಗೆ 3ನೇ ಬೆಳೆವಿಮೆ ಸಪ್ತಾಹದ ಅಂಗವಾಗಿ ಪ್ರಚಾರ ಕೈಗೊಳ್ಳುವ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇಂದಿನಿಂದ ಜುಲೈ7 ರವರೆಗೆ 3ನೇ ಬೆಳೆ ವಿಮೆ ವಾರವಾಗಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಜಿಲ್ಲಾದ್ಯಂತ 22 ವಾಹನಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 16 ಬೆಳೆಗಳನ್ನು ಗುರುತಿಸಲಾಗಿದೆ ಎಂದರು.
ಈ ಯೋಜನೆಯ ಲಾಭವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ವಿಮೆಗೆ ನೋಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ ಎಂದರಲ್ಲದೇ ಈವರೆಗೆ 62 ಸಾವಿರ ರೈತರು ನೋಂದಾಯಿಸಲ್ಪಟ್ಟಿದ್ದು 1 ಲಕ್ಷಕ್ಕೂ ಅಧಿಕ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದ ರೈತರು ಕೂಡಲೇ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕು ವಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನ, ಉಪ ಕೃಷಿ ನಿರ್ದೇಶಕ ಟಿ.ಎನ್ ಆಶೋಕ್, ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್ ಚಿದಾನಂದ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.