ತುಮಕೂರು:
ಹನ್ನೆರಡನೆಯ ಶತಮಾನದಲ್ಲಿ ರಚಿಸಲ್ಪಟ್ಟ ವಚನ ಸಾಹಿತ್ಯವು ಓಲೆಗರಿ, ತಾಲೆ ಎಲೆಗಳಲ್ಲಿತ್ತು. ಅಂತಹ ವಚನಗಳ ಕಟ್ಟನ್ನು ಸಂಗ್ರಹಿಸಿ, ಅಧ್ಯಯನ ಮಾಡಿ ಮುದ್ರಿಸಿ ಜಗತ್ತಿಗೆ ಪರಿಚಯಿಸಿದವರು ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಎಂದು ಇತಿಹಾಸ ಸಂಶೋಧಕ ಡಾ.ಡಿ.ಎನ್ ಯೋಗಿಶ್ವರಪ್ಪ ತಿಳಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭಾ, ನಗರ ವೀರಶೈವ ಸಮಾಜ ಸೇವಾ ಸಮಿತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸವ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಜನ್ಮದಿನದ ಹಿನ್ನೆಲೆಯ “ವಚನ ಸಾಹಿತ್ಯ ದಿನಾಚರಣೆಯಲ್ಲಿ” ಪಾಲ್ಗೊಂಡು ಅವರು ಮಾತನಾಡಿದರು.
ವಕೀಲಿ ವೃತ್ತಿಯಲ್ಲಿದ್ದ ಹಳಕಟ್ಟಿಯವರು ಬಿಜಾಪುರದ ಹಳ್ಳಿಯೊಂದರಲ್ಲಿ ವಚನಗಳ ಕಟ್ಟೊಂದು ಸಿಕ್ಕಿತ್ತು. ಅದರಲ್ಲಿರುವ ಸಾಹಿತ್ಯವನ್ನು ನೋಡಿ ಆಶ್ಚರ್ಯಚಕಿತರಾಗಿ ಅವುಗಳನ್ನು ಅಧ್ಯಯನ ಮಾಡಿ ಅದನ್ನು ಜಗತ್ತಿಗೆ ಪರಿಚಯಿಸಬೇಕೆಂದು ಪಣತೊಟ್ಟು ಹಳ್ಳಿ- ಹಳ್ಳಿಗಳಿಗೆ ಸೈಕಲ್‍ನಲ್ಲಿ ತಿರುಗಿ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ ಅವುಗಳ ಮುದ್ರಿಸಲು ಬದುಕನ್ನೆ ಮೀಸಲಿಟ್ಟ ಶ್ರೇಷ್ಠ ಸಂಶೋಧಕ ಎಂದು ತಿಳಿಸಿದರು.
ಹಳಕಟ್ಟಿಯವರು ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ಮಂಗಳೂರಿನ ಬಾಸೆಲ್ ಮಿಷನ್ ನಿರಾಕರಿಸಿದಾಗ ಚೌಗಲೆ ಪ್ರಿಟಿಂಗ್ ಮೂಲಕ ವಚನ ಸಾಹಿತ್ಯ ಭಾಗ 1,2,3 ಸಂಪುಟಗಳಲ್ಲಿ ಹೊರತಂದರು. ಮುಂದೆ ತಮ್ಮ ಮನೆಯನ್ನು ಮಾರಿ ಸ್ವತಃ ಮುದ್ರಣಾಲಯವನ್ನು ತೆರೆದು ವಚನ ಸಾಹಿತ್ಯವನ್ನು ಶಿವಾನುಭವ ಎಂಬ ತ್ರೈಮಾಸಿಕದ ಮೂಲಕ ಜಗತ್ತಿಗೆ ಪರಿಚಯಿಸಿದವರು. ಕರ್ನಾಟಕ ಏಕೀಕರಣ ಚಳುವಳಿಯನ್ನು ಬೆಂಬಲಿಸಿ ನವಕರ್ನಾಟಕ ಪತ್ರಿಕೆಯನ್ನು ಹೊರಡಿಸಿ ಏಕೀಕರಣ ವಿಷಯಗಳನ್ನು ಪ್ರಕಟಿಸಿದರು.ಶಿವಾನುಭವ ಪತ್ರಿಕೆಯಲ್ಲಿ ಹಾಗಲವಾಡಿ ಪಾಳೇಗಾರರ ಚರಿತ್ರೆಯನ್ನು ಪ್ರಕಟಿಸಿದರು ಎಂದರು.
ಏಕೀಕರಣ ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಹಳಕಟ್ಟಿಯವರು ಮರಾಠ ಪ್ರಭಾವವಿದ್ದ ಬಿಜಾಪುರದಲ್ಲಿ ಕನ್ನಡ ಶಾಲೆಯನ್ನು ಕಟ್ಟಿಬೆಳೆಸಿದ ಕೀರ್ತಿ ಅವರಿಗೆ ಸಲ್ಲುವುದು. ಇಂದಿಗೂ ಅವರ ಹೆಸರಿನಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳನ್ನು ತೆರೆಯಲಾಗಿದೆ ಎಂದರು.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರನ್ನು ಬಡತನ ಮತ್ತು ಮಗನ ಅಕಾಲಿಕ ಮರಣ ಬಹುವಾಗಿ ಕಾಡಿದ್ದವು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಮಾತನಾಡಿ ಧಾರವಾಡದಲ್ಲಿ ಹುಟ್ಟಿ ಬಿಜಾಪುರದಲ್ಲಿ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಡಾ ಹಳಕಟ್ಟಿಯವರು ಸಂಪಾದನೆ ಮಾಡಿಕೊಟ್ಟ ವಚನ ಸಾಹಿತ್ಯ/ಸಾರವನ್ನು ಅಧ್ಯಯನ ಮಾಡುವುದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದಾರೆ.ಮುಂದಿನ ದಿನಗಳಲ್ಲಿ ಸರ್ಕಾರವು ಫ.ಗು ಹಳಕಟ್ಟಿಯವರ ಕುರಿತಂತೆ ಒಂದು ದಿನದ ವಿಚಾರ ಸಂಕೀರಣವನ್ನು ಏರ್ಪಡಿಸಿದರೆ ಅವರ ವಚನ ಸಾಹಿತ್ಯದ ಕೊಡುಗೆಯ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಜಿ ಸಿದ್ದರಾಮಯ್ಯ, ಲೇಖಕಿ ಬಿ.ಸಿ ಶೈಲಾನಾಗರಾಜು ಮಾತನಾಡಿದರು.ಕಾರ್ಯಕ್ರಮಕ್ಕೂ ಮುನ್ನ ಭಕ್ತಿಗಾಯನ ಮತ್ತು ವಚನಗಾಯನ ನಡೆಸಿಕೊಡಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸೂಪರ್ವೈಸರ್ ಸುರೇಶ್ ಕುಮಾರ್, ವೀರಶೈವ ಮಹಾಸಭಾ, ನಗರ ವೀರಶೈವ ಸೇವಾ ಸಮಾಜದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.