ತುಮಕೂರು:


ಬಿಜೆಪಿ ಸಂಘಟನೆಯನ್ನು ತಳಮಟ್ಟದಿಂದ ಕಾರ್ಯಕರ್ತರು, ಪ್ರಮುಖರು ಸಂಘಟಿಸಿದರೆ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ರವಿಶಂಕರ್ (ರವಿ ಹೆಬ್ಬಾಕ)ರವರು ತಿಳಿಸಿದರು.
ಇವರು ತುಮಕೂರು ತಾಲ್ಲೂಕಿನ ಹೆಬ್ಬೂರಿನ ಹೊರವಲಯದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿರವರ ಜೀವನ ಚರಿತ್ರೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಾತನಾಡುತ್ತ, ಜನಸಂಘದ ಸಂಸ್ಥಾಪಕ ಪ್ರಮುಖರಲ್ಲಿ ಒರ್ವರಾಗಿದ್ದ ಡಾ|| ಶ್ಯಾಮ್‍ಪ್ರಸಾದ್ ಮುಖರ್ಜಿ ದೇಶದ ಏಕತೆ, ಅಖಂಡತೆ, ಸಮಗ್ರತೆಗೆ ಅಂದೇ ಬುನಾದಿಯನ್ನು ಹಾಕಿ, ರಾಷ್ಟ್ರಪ್ರೇಮ-ರಾಷ್ಟ್ರಭಕ್ತಿಗೆ ಅಡಿಪಾಯವನ್ನು ಹಾಕಿ ಸಮಗ್ರ ಭಾರತದ ಅಭಿವೃದ್ಧಿ ಯೋಜನೆಯ ಪರಿಕಲ್ಪನೆಯನ್ನು ಪಕ್ಷದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು ಎಂದರು.
ಬಿಜೆಪಿ ರಾಜ್ಯ ಸಹ ವಕ್ತಾರ ವಿಕಾಸ್ ಪುತ್ತೂರುರವರು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ವಿವರಿಸುತ್ತಾ, ಜಮ್ಮು ಕಾಶ್ಮೀರವೂ ಭಾರತದ ಮುಕುಟಮಣಿಯಾಗಿ ಉಳಿಯಲು ಡಾ|| ಶ್ಯಾಮ್‍ಪ್ರಸಾದ್ ಮುಖರ್ಜಿರವರ ಹೋರಾಟ, ತ್ಯಾಗ, ಬಲಿದಾನದಿಂದ ಸಾಧ್ಯವಾಗಿದೆ. ಇದು ಸಮಗ್ರ ಭಾರತೀಯರನ್ನು ಒಗ್ಗೂಡಿಸುವ ಪರಿಕಲ್ಪನೆಯಾಗಿದೆ ಎಂದು ಸಭೆಯಲ್ಲಿ ಸವಿಸ್ತರವಾಗಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಮತ್ತೋರ್ವ ಪ್ರಮುಖರಾದ ಮಾಜಿ ಶಾಸಕ ಬಿ.ಸುರೇಶ್‍ಗೌಡರವರು, ಸ್ವಾತಂತ್ರ್ಯ ನಂತರ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ಕಳೆದ 60 ವರ್ಷಗಳಿಂದ ಆಳ್ವಿಕೆ ನಡೆಸಿದ್ದ ಸರ್ಕಾರಗಳು ಜಮ್ಮು ಕಾಶ್ಮೀರವನ್ನು ಅಭಿವೃದ್ಧಿಯಿಂದ ವಂಚಿತವನ್ನಾಗಿಸಿದ್ದವು. ಆದರೆ ಕೇಂದ್ರದಲ್ಲಿ ಎರಡನೇ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಸರ್ಕಾರವು ಆರ್ಟಿಕಲ್ 370ನ್ನು ರದ್ದುಗೊಳಿಸಿದ ಜೊತೆಗೆ ರಾಮ ಮಂದಿರ ನಿರ್ಮಾಣವನ್ನು ಸಾಕಾರಗೊಳಿಸುವ ಮೂಲಕ ಡಾ|| ಶ್ಯಾಮ್‍ಪ್ರಸಾದ್ ಮುಖರ್ಜಿರವರ ಆದರ್ಶಗಳನ್ನು ಪಾಲಿಸಿ, ಎಲ್ಲರ ಕನಸನ್ನು ನನಸಾಗಿಸಿದರು ಎಂದರು.
ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಆಯರಳ್ಳಿ ಶಂಕರಪ್ಪ ಮಾತನಾಡುತ್ತಾ, ಡಾ|| ಶ್ಯಾಮ್‍ಪ್ರಸಾದ್ ಮುಖರ್ಜಿರವರ ಮನದಾಳದಂತೆ ಕೇಂದ್ರÀ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡುವಂತೆ ಕರೆ ನೀಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಬೂತ್ ಮಟ್ಟದಿಂದ ಪಕ್ಷವನ್ನು ಬಲಗೊಳಿಸಿ, ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಅತೀ ಹೆಚ್ಚು ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರುಗಳ ಡಬ್ಬಲ್ ಇಂಜಿನ್ ಸರ್ಕಾರಗಳ ಅಭಿವೃದ್ಧಿಯ ರಥಕ್ಕೆ ಹೆಚ್ಚಿನ ಬಲ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್, ಜಿಲ್ಲಾ ಉಪಾಧ್ಯಕ್ಷರಾದ ಹುಚ್ಚಯ್ಯ, ತುಮಕೂರು ಗ್ರಾಮಾಂತರ ಅಧ್ಯಕ್ಷ ಡಿ.ಎನ್.ಶಂಕರ್, ಓಬಿಸಿ ಮುಖಂಡ ಬೆಟ್ಟಸ್ವಾಮಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ, ಜಿಲ್ಲಾ ಕಾರ್ಯದರ್ಶಿ ಅ.ನಾ.ಲಿಂಗಪ್ಪ, ಜಿಲ್ಲಾ ಓಬಿಸಿ ಉಪಾಧ್ಯಕ್ಷ ಬನಶಂಕರಿ ಬಾಬು, ಪ್ರಧಾನ ಕಾರ್ಯದರ್ಶಿ ಗೋಕುಲ್ ಮಂಜುನಾಥ್, ತುಮಕೂರು ಮತ್ತು ಮಧುಗಿರಿ ಓಬಿಸಿ ಮೋರ್ಚಾ ಸಂಯೋಜಕ ಪ್ರಮುಖ್ ಚಂದನ್ ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ವಿಷ್ಟುವರ್ಧನ್, ಎನ್.ಎನ್.ಗೋಪಾಲಕೃಷ್ಣ, ಓಬಿಸಿ ಮೋರ್ಚಾದ ಜಿಲ್ಲಾ ಮಾಧ್ಯಮ ಸಂಚಾಲಕ ವಿ.ಬಿ.ನಾಗೇಶ್, ಸಾಮಾಜಿಕ ಜಾಲತಾಣ ಹಾಗೂ ಐ.ಟಿ. ಸೆಲ್ ಸಹಸಂಚಾಲಕ ಧನರಾಜ್, ತುಮಕೂರು ಗ್ರಾಮಾಂತರ ಮಂಡಲ ಓಬಿಸಿ ಅಧ್ಯಕ್ಷ ಶಿವಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರುಗಳು ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಜಿಲ್ಲಾ ಸಾಮಾಜಿಕ ಜಾಲತಾಣದ ಸಹ ಸಂಚಾಲಕಿ ಶಕುಂತಲ ನಟರಾಜ್ ಹಾಡಿದರು. ಓಬಿಸಿ ಮೋರ್ಚಾದ ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ವೇದಮೂರ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಎ.ಪಿ.ಎಂ.ಸಿ. ಸದಸ್ಯ ಹಾಗೂ ತುಮಕೂರು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಶಿವಕುಮಾರ್ ವಂದಿಸಿದರು.

(Visited 1 times, 1 visits today)