ತುಮಕೂರು:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ಒತ್ತಾಯಿಸಿ 140 ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿರುವ ರಾಜನಹಳ್ಳಿಯ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳ ಕರೆಯ ಮೇರೆಗೆ ಜುಲೈ 11ರ ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಕÀರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಹೋರಾಟಗಾರರಾದ ಮೋಹನರಾಜ್ ತಿಳಿಸಿದ್ದಾರೆ.
ನಗರದ ವಾಲ್ಮೀಕಿ ಸನಿವಾಸ ಪ್ರೌಢಶಾಲೆಯ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಶೋಷಣೆ ಅನುಭವಿಸಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಒಗ್ಗೂಡಿ ಈ ಹೋರಾಟವನ್ನು ರೂಪಿಸುತ್ತಿದ್ದು,ಇದು ನನ್ನ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಸಂವಿಧಾನದ ಅಡಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು.ಆದರೆ ಭೂಮಿ, ಸಂಪತ್ತು ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯವಿದ್ದು, ಇದನ್ನು ಹೋಗಲಾಡಿಸುವ ಜಾರಿಗೆ ತಂದ ಮೀಸಲಾತಿಯನ್ನು ಸಹ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಿಲ್ಲ. ಈ ತಾರತಮ್ಯ ನಿವಾರಣೆಯಾಗಬೇಕಾದರೆ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಯೊಂದೇ ಪರಿಹಾರವಾಗಿದೆ ಎಂದರು.
ರಾಜನಹಳ್ಳಿ ಶ್ರೀವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಸ್ವಾಮೀಜಿಯವರು 2019ರಲ್ಲಿ ಕೈಗೊಂಡ ಬೃಹತ್ ಪಾದಯಾತ್ರೆಯ ಫಲವಾಗಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜೆಸ್ಟಿಸ್ ನಾಗಮೋಹನ್ ದಾಸ್ ಆಯೋಗ ರಚಿಸಿದ್ದರು. ಸದರಿ ಆಯೋಗ ಜುಲೈ 20ಕ್ಕೆ ವರದಿ ನೀಡಿ ಎರಡು ವರ್ಷ ಕಳೆಯುತ್ತಾ ಬಂದಿದ್ದರು ಇದವರೆಗು ಸರಕಾರ ವರದಿಯನ್ನು ಪುರಸ್ಕರಿಸುವ ಬದಲು ತ್ರಿಸದಸ್ಯ ಆಯೋಗಕ್ಕೆ ನೀಡಿ, ವಿಳಂಭ ಧೋರಣೆ ಅನುಸರಿಸುತ್ತಿದೆ. ಕೂಡಲೇ ವರದಿಯನ್ನು ತ್ರಿಸದಸ್ಯ ಆಯೋಗದಿಂದ ಹಿಂಪಡೆದು, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂಬುದು ಇಡೀ ಹೋರಾಟದ ಮಹತ್ವದ ಬೇಡಿಕೆ ಯಾಗಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿ ಅವರ ಹೋರಾಟ 150ನೇ ದಿನಕ್ಕೆ ಸಮೀಪಿಸುತ್ತಿದು, ಅಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸುವುದರ ಜೊತೆಗೆ, ಸರಕಾರ ಮೇಲೆ ಒತ್ತಡ ತರಬೇಕೆಂಬುದು ಶ್ರೀಗಳ ಇಚ್ಚೆಯಾಗಿದೆ. ಅದಕ್ಕೆ ಎರಡು ಸಮುದಾಯಗಳ ಜನರು ಒಗ್ಗೂಡಿ ಕೆಲಸ ಮಾಡಬೇಕೆಂದು ಮೋಹನ್ ರಾಜ್ ಮನವಿ ಮಾಡಿದರು.
ಬಿಎಸ್‍ಪಿ ಯ ಜಿಲ್ಲಾಧ್ಯಕ್ಷ ರಾಜಸಿಂಹ ಮಾತನಾಡಿ, ಬೇಡ ಜಂಗಮರ ಹೆಸರಿನಲ್ಲಿ ಕೆಲವು ಮೇಲ್ವರ್ಗಗಳು ಮೀಸಲಾತಿ ಪಡೆಯುತ್ತಿರುವ ಕಾಲದಲ್ಲಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮಗೆ ಮೀಸಲಾತಿ ನೀಡಿ ಎಂದು ಆಳುವ ಸರಕಾರಗಳ ಮುಂದೆ ಬೇಡುವ ಪರಿಸ್ಥಿತಿ ಬಂದಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ದುರ್ದೈವ.ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಈ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಮಾತನಾಡುತ್ತಿಲ್ಲ. ಹಾಗಾಗಿ ನಾವುಗಳೇ ನಮ್ಮ ದ್ವನಿಯನ್ನು ಎತ್ತರಿಸಿ, ಆಳುವ ಸರಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಆದ್ದರಿಂದ ಎರಡು ಸಮುದಾಯಕ್ಕೆ ಸೇರಿದ ಎಲ್ಲಾ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹೋರಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ವಾಲ್ಮೀಕಿ ವಿದ್ಯಾವರ್ಧಕ ಸಂಘದ ಶ್ರೀಮತಿ ಸರಸ್ವತಿ ಮಾತನಾಡಿ, ಸಮಾನ ಶೋಷಣೆ ಅನುಭವಿಸಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮೀಸಲಾತಿ ಹೋರಾಟ ಮೂಲಕ ಒಗ್ಗೂಡಿರುವುದು ಸಂತೋಷದ ವಿಚಾರ.ಬೇರೆ ಸಮುದಾಯದ ಸ್ವಾಮೀಜಿಗಳು ಇಷ್ಟು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರೆ ಇಡೀ ಸರಕಾರವೇ ಶರಣಾಗುತ್ತಿತ್ತು.
ಆದರೆ ಶೇ25ಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಒಗ್ಗೂಡಿದರೆ ಇಡೀ ಸರಕಾರವನ್ನೇ ಅಲುಗಾಡಿಸಲು ಸಾಧ್ಯ. ಇದನ್ನು ಜುಲೈ 11 ರ ಹೋರಾಟದಲ್ಲಿ ಮಾಡಿ ತೋರಿಸೋಣ ಎಂದರು.
ದಲಿತ ಸಂಘರ್ಷ ಸಮಿತಿಯ ಪಿ.ಎನ್.ರಾಮಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಓಬಿಸಿಗಳಿಗೆ ತೊಂದರೆಯಾಗದಾಗ ಅವರ ಜೊತೆ ನಿಂತು ಹೋರಾಟ ಮಾಡಿದ್ದೇವೆ. ಈಗ ಅವರ ನಮ್ಮ ಬೆಂಬಲಕ್ಕೆ ಬರಬೇಕು. ಒಬಿಸಿ ಸ್ವಾಮೀಜಿಗಳು ಜನಾಂಗಗಳಿಗೆ ಕರೆ ನೀಡಿ, ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಲಿ ಎಂದರು.
ವಕೀಲರಾದ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ, ಜುಲೈ 11 ರಂದು ನಡೆಯುವ ಈ ಬೃಹತ್ ಹೋರಾಟವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಎರಡು ಸಮುದಾಯಗಳ ಮುಖಂಡರ ಸಭೆಗಳನ್ನು ನಡೆಸಿ, ಹೋರಾಟಕ್ಕೆ ಹೆಚ್ಚು ಜನರನ್ನು ಸೇರಿಸುವ ಕೆಲಸ ಮಾಡೋಣ ಎಂದರು.
ಸಭೆಯಲ್ಲಿ ಶ್ರೀವಾಲ್ಮೀಕಿ ಸನಿವಾಸ ಶಾಲೆಯ ಆಡಳಿತ ಮಂಡಳಿಯ ಪುರುಷೋತ್ತಮ್, ಪ್ರತಾಪ್ ಮದಕರಿ, ನಿವೃತ್ತ ಶಿಕ್ಷಣಾಧಿಕಾರಿ ಬಸವರಾಜು, ಮುಖಂಡರಾದ ಡಾ.ಅಂಜನಕುಮಾರ್ ವಾಲ್ಮೀಕಿ, ಆಟೋಶಿವರಾಜು, ಬಿ.ಎಸ್.ಪಿಯ ರಂಗಧಾಮಯ್ಯ, ಪಾರ್ಥ ಸಾರತಿ, ಹೆಬ್ಬೂರಿನ ಗಾಂಧಿರಾಜು, ಮುರುಳಿ ಕುಂದೂರು ಸೇರಿದಂತೆ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.