ತುಮಕೂರು:


ನ್ಯಾ.ಎ.ಜೆ.ಸದಾಶಿವ ವರದಿ ಜಾರಿಗೆ ಒತ್ತಾಯಿಸಿ, ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರ ಸೂಚನೆಯಂತೆ ಇಂದು ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಕ್ಯಾತ್ಸಂದ್ರ ಸರ್ಕಲ್‍ನಲ್ಲಿ ರಸ್ತೆ ತಡೆ ನಡೆಸಿದರು.
ಶನಿವಾರ ಮಧ್ಯಾಹ್ನ 12:30ರ ಸುಮಾರಿಗೆ ಹತ್ತಾರು ಸಂಖ್ಯೆಯಲ್ಲಿದ್ದ ಮಾದಿಗ ದಂಡೋರ ಕಾರ್ಯಕರ್ತರು, ರಾಷ್ಟ್ರೀಯ ಹೆದ್ದಾರಿ ಹೊಸ 48 ರ ಕ್ಯಾತ್ಸಂದ್ರ ಸರ್ಕಲ್‍ಬಳಿ ರಸ್ತೆ ತಡೆ ನಡೆಸಿ, ಕೂಡಲೇ ಸರಕಾರ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರ, ಮಾದಿಗ ಸಮುದಾಯದ ನಿರಂತರ ಹೋರಾಟದ ಫಲವಾಗಿ 2004ರಲ್ಲಿ ಎಸ್.ಎಂ.ಕೃಷ್ಣ ಅವರು ಪರಿಶಿಷ್ಟ ಜಾತಿಯಲ್ಲಿರುವ 101 ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ವೈಜ್ಞಾನಿಕ ವರದಿ ತಯಾರಿಸಲು ನ್ಯಾ.ಎ.ಜೆ.ಸದಾಶಿವ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದರು. ಸದರಿ ಆಯೋಗ 2011ರಲ್ಲಿ ವರದಿ ಸಲ್ಲಿಸಿದೆ.ಸರಕಾರಕ್ಕೆ ವರದಿ ಸಲ್ಲಿಕೆಯಾಗಿ 11 ವರ್ಷ ಕಳೆದರು ಸರಕಾರ ಸದರಿ ವರದಿಯನ್ನು ಸದನದಲ್ಲಿ ಮಂಡಿಸಿ, ಚರ್ಚೆ ನಡೆಸಿಲ್ಲ. ಇಲ್ಲ ಸಾರ್ವಜನಿಕ ಅಭಿಪ್ರಾಯಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಕಳೆದ 11 ವರ್ಷಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರ ನಡೆಸಿದ್ದು, ಮೂರು ಪಕ್ಷಗಳು ಮಾದಿಗ ಸಮುದಾಯದ ಬಗ್ಗೆ ನಿರ್ಲಕ್ಷ ಧೋರಣೆ ತಾಳಿವೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ನಮ್ಮ ನಾಯಕರ ಸೂಚನೆಯಂತೆ ರಸ್ತೆ ತಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗುಬ್ಬಿ ತಾಲೂಕು ಅಧ್ಯಕ್ಷ ಕೋಡಿಯಾಲ ಮಹದೇವು ಮಾತನಾಡಿ,ಕಳೆದ 10 ವರ್ಷಗಳಿಂದ ಆಳುವ ಸರಕಾರಗಳು ಮಾದಿಗರ ಸಣ್ಣ, ಪುಟ್ಟ ಬೇಡಿಕೆಗಳನ್ನು ಈಡೇರಿಸುವ ಮೂಲಕ ಜನಾಂಗದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ.ಇದು ಖಂಡನೀಯ. ಸರಕಾರ ಕೂಡಲೇ ನ್ಯಾ.ಎ.ಜೆ.ಸದಾಶಿವ ವರದಿಯನ್ನು ಯಥಾವತ್ತಾಗಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿಬೇಕೆಂದು ಆಗ್ರಹಿಸಿದರು.

(Visited 3 times, 1 visits today)