ತುಮಕೂರು:


ಜಿಲ್ಲೆಯಲ್ಲಿ ವಿದ್ಯಾರ್ಥಿ ಪಾಸ್‍ನ ವಿತರಣೆಯಲ್ಲಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದು, ಕೂಡಲೇ ಹೆಚ್ಚುವರಿ ಕೌಂಟರ್‍ಗಳನ್ನು ತೆರೆದು ಶಾಲಾ-ಕಾಲೇಜು ವಿದ್ಯಾರ್ಥಿಗಳು ಅನುಕೂಲ ಕಲ್ಪಿಸಬೇಕೆಂದು ಎನ್‍ಎಸ್‍ಯುಐ ವಿದ್ಯಾರ್ಥಿ ಸಂಘಟನೆಯೊಂದಿಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಒತ್ತಾಯಿಸಿದರು.
ನಗರದ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡು ಕೆಎಸ್‍ಆರ್‍ಟಿಸಿ ಜಿಲ್ಲಾಧಿಕಾರಿ ಬಸವರಾಜು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಪಾಸ್‍ಗಾಗಿಯೇ ದಿನಗಟ್ಟಲೆ ಕ್ಯೂನಲ್ಲಿ ನಿಲ್ಲುವಂತಾಗಿದೆ. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಈಗತಾನೆ ಪ್ರವೇಶ ಪಡೆಯುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳು ಕಾಲೇಜುಗಳಿಗೆ ಗೈರು ಹಾಜರಾಗಿ ಬಸ್ ಪಾಸ್ ಪಡೆಯಲು ದಿನಗಟ್ಟಲೇ ಕ್ಯೂ ನಿಲ್ಲುತ್ತಿದ್ದಾರೆ ಎಂದರು.
ಕಾಲೇಜಿಗೆ ಸೇರಿದ ಪ್ರವೇಶ ಪತ್ರವಿದ್ದರೆ ಸಾಕೇ ಅಥವಾ ಮತ್ಯಾವುದಾದರೂ ದಾಖಲಾತಿ ಬೇಕಾ ಎಂಬುದನ್ನು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಸ್ಪಷ್ಟವಾಗಿ ವಿದ್ಯಾರ್ಥಿಗಳಿಗೆ ತಿಳಿಸಬೇಕು, ಇಲ್ಲಿಯವರೆಗೆ ಒಟ್ಟಾರೆ ಎಷ್ಟು ಪಾಸ್‍ಗಳು ವಿತರಣೆಯಾಗಬೇಕಿತ್ತು, ಇಲ್ಲಿಯವರೆಗೆ ಎಷ್ಟು ವಿತರಣೆಯಾಗಿವೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಕಾಲೇಜಿನಿಂದ ಡಿಪೋಗೆ ಮೂರ್ನಾಲ್ಕು ಸಲ ವಿದ್ಯಾರ್ಥಿಗಳು ಬಸ್‍ಪಾಸ್‍ಗಾಗಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮಾಡಬೇಡಿ, ವಿದ್ಯಾರ್ಥಿಗಳ ಸಮಯವನ್ನು ಹಾಳು ಮಾಡಬೇಡಿ, ವಿದ್ಯಾರ್ಥಿಗಳು ಬಸ್ ಹತ್ತಿದ ತಕ್ಷಣ ಅವರನ್ನು ಬೇರೆ ಬೇರೆ ರೀತಿ ನೋಡುವುದನ್ನು ಮೊದಲು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಾಲೇಜಿನಲ್ಲಿಯೇ ವಿತರಿಸಲು ಕ್ರಮ ಕೈಗೊಳ್ಳಬೇಕು, ಬಸ್ ಪಾಸ್ ವಿತರಣೆ ಕೌಂಟರ್‍ಗಳ ಸಂಖ್ಯೆ ಹೆಚ್ಚಿಸಿ ಸರಳ ಮತ್ತು ಶೀಘ್ರವಾಗಿ ಬಸ್ ಪಾಸ್ ವಿತರಿಸಬೇಕು, ಸರ್ಕಾರಿ ನೌಕರರಿಗೆ ಕೆಎಸ್‍ಆರ್‍ಟಿಸಿ ನೌಕರರಿಗೂ ಸುಮಾರು 40 ರಷ್ಟು ವೇತನದಲ್ಲಿ ವ್ಯತ್ಯಾಸವಿದ್ದು, ಕೂಡಲೇ ವೇತನ ಪರಿಷ್ಕರಣೆ ಜಾರಿ ಮಾಡಿ ಕನಿಷ್ಟ 30-40 ರಷ್ಟು ವೇತನ ಹೆಚ್ಚಿಸಬೇಕು, ಸ್ಥಗಿತಗೊಳಿಸಿರುವ ಹಬ್ಬದ ಮುಂಗಡ, ಗಳಿಕೆ ರಜೆ ನಗದೀಕರಣ ಇತರ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಕೆಎಸ್‍ಆರ್‍ಟಿಸಿ ನಾಲ್ಕು ನಿಗಮಗಳಿಂದ ಒಂದೂವರೆ ಸಾವಿರ ಕೋಟಿ ಡೀಸೆಲ್‍ಗೆ ಹೆಚ್ಚುವರಿಯಾಗಿ ಖರ್ಚು ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಸುಮಾರು ಒಂದು ಲಕ್ಷ ಮೂವತ್ತು ಸಾವಿರ ನೌಕರರಿಗೆ ಅತ್ಯಂತ ಕನಿಷ್ಟ ವೇತನ ಪಾವತಿಸುತ್ತಿದ್ದು, ಪ್ರತಿ ನಿತ್ಯ ಲಕ್ಷಾಂತರ ಜನರಿಗೆ ಆಸರೆಯಾಗಿರುವ ಕೆಎಸ್‍ಆರ್‍ಟಿಸಿಯಿಂದ ಪ್ರತಿ ನಿತ್ಯ 20-25 ಕೋಟಿ ಆದಾಯ ಬರುತ್ತಿದ್ದು, 3 ವರ್ಷವಾದರೂ ಸಹ ಇದುವರೆಗೆ ವೇತನ ಪರಿಷ್ಕರಣೆ ಮಾಡದಿದ್ದರೆ ನೌಕರರು ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
60 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಸೇಲ್‍ಗಾಗಿ ಕೆಎಸ್‍ಆರ್‍ಟಿಸಿಯಿಂದ 1 ಲೀಟರ್‍ಗೆ 33 ರೂಪಾಯಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದು, ಇದರಿಂದಾಗಿ ಪ್ರತಿನಿತ್ಯ 3.5 ಕೋಟಿ ಹೆಚ್ಚುವರಿ ಹೊರೆಯಾಗುತ್ತಿದ್ದು, ಇದು ಹೀಗೆ ಮುಂದುವರೆದರೆ ಕೆಎಸ್‍ಆರ್‍ಟಿಸಿ ಇತಿಹಾಸವಾಗಿ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಸರ್ಕಾರಕ್ಕೂ ಮತ್ತು ಪೆಟ್ರೋಲ್ ಬಂಕ್‍ಗಳಿಗೆ ಯಾವ ರೀತಿ ಒಡಂಬಡಿಕೆಯಿದೆಯೋ ಗೊತ್ತಿಲ್ಲ, ಜನರ ತೆರಿಗೆಯ ಹಣವನ್ನು ಸರಿಯಾಗಿ ನಿರ್ವಹಣೆ ಮಾಡದೆ ನಿಗಮಗಳು ನಷ್ಟದಲ್ಲಿವೆ ಎಂದು ತೋರಿಸಲಾಗುತ್ತಿದೆ ಎಂದು ಆರೋಪಿಸಿದರು.
ಮುಷ್ಕರದ ಸಮಯದಲ್ಲಿ ವಜಾಗೊಂಡ ನೌಕರರನ್ನು ಪುನರ್ ನೇಮಕಗೊಳಿಸಲು ಬಾಕಿ ಇರುವ 2000 ನೌಕರರನ್ನು ಕೂಡಲೇ ಷರತ್ತುಗಳಿಲ್ಲದೇ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು, ಡೀಸೆಲ್ ಮತ್ತು ಬಸ್ ನಿರ್ವಹಣೆಯ ಲೆಕ್ಕಗಳಲ್ಲಿ ವ್ಯತ್ಯಾಸವಾಗುತ್ತಿವೆ ಅದನ್ನು ಸರಿಪಡಿಸಬೇಕು. ಬೆಳಿಗ್ಗೆ 8 ರಿಂದ 10 ಗಂಟೆ, ಸಂಜೆ 4 ರಿಂದ 6 ಗಂಟೆವರೆಗೆ ಹೆಚ್ಚುವರಿ ಬಸ್‍ಗಳನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.

(Visited 1 times, 1 visits today)