ತುಮಕೂರು:


ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷದ ಸಾಧನೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೋದಿ ಸರ್ಕಾರದ ಸಾಧನೆ, ಯೋಜನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ನಗರದ 32ನೇ ವಾರ್ಡಿನ ಗೋಕುಲ ಬಡಾವಣೆಯಲ್ಲಿ ಭಾನುವಾರ ಸಂಜೆ ಜಿಲ್ಲಾ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಯ ಸಂಭ್ರಮ ಆಚರಿಸಲಾಯಿತು. ಮೋದಿ ಸರ್ಕಾರದ ಸಾಧನೆಯ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಶಾಸಕ ಬಿ.ಜಿ.ಜ್ಯೋತಿಗಣೇಶ್, ಇವತ್ತು ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಯಾಗುತ್ತಿರುವುದು ಮೋದಿಯವರು ಕೊಟ್ಟ ಕೊಡುಗೆ, ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಿ ನಾಗರೀಕರಿಗೆ ಅಗತ್ಯ ಸೌಲಭ್ಯ ನೀಡಲು ಸಹಕರಿಸಿದ ಪ್ರಧಾನಿಯವರ ಕೊಡುಗೆ ಶ್ಲಾಘನೀಯ ಎಂದರು.
ಪ್ರಧಾನಿಯವರು ಎಲ್ಲಾ ವರ್ಗದವರಿಗೂ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದಾರೆ. ಜನಸಾಮಾನ್ಯರಿಗೆ ಯೋಜನೆಯ ಪರಿಚಯ, ಫಲ ದೊರೆಯಬೇಕು. ಬಿಜೆಪಿ ಕಾರ್ಯಕರ್ತರು ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮುಂದಿನ 30-40 ವರ್ಷ ಬಿಜೆಪಿ ಯುಗ ಎಂದು ಅಮಿತ್ ಷಾ ಹೇಳಿದ್ದಾರೆ, ಆ ವಿಶ್ವಾಸ ಎಲ್ಲಾ ಕಾರ್ಯಕರ್ತರಿಗೂ ಇದೆ. ಮುಂದಿನ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಬಹುಮತದಿಂದ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಮೂಲಕ ಕಾರ್ಯಕರ್ತರು ನೆರವಾಗಬೇಕು ಎಂದು ಹೇಳಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಉತ್ತಮ ಆಡಳಿತದ ಮೂಲಕ ಭಾರತ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಖ್ಯಾತರಾಗಿರುವ ಪ್ರಧಾನಿ ಮೋದಿಯವರು ದೇಶದ ಘನತೆಯನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಲು ಕಾರಣರಾಗಿದ್ದಾರೆ. ಅವರು ದೇಶಕ್ಕೆ ನೀಡಿದ ಕೊಡುಗೆ, ರೂಪಿಸಿದ ಯೋಜನೆಗಳು ಜನರ ಬದುಕಿಗೆ ನೆರವಾಗಿವೆ. ಆದರೂ ಬಹಳಷ್ಟು ಜನರಿಗೆ ಯೋಜನೆಗಳ ಪರಿಚಯವಿಲ್ಲ, ಅಂತಹವರಿಗೆ ನಮ್ಮ ಕಾರ್ಯಕರ್ತರು ತಿಳಿಸಬೇಕು ಎಂದು ಹೇಳಿದರು.
ಮಧ್ಯವರ್ತಿಗಳಿಲ್ಲದೆ ಯೋಜನೆಗಳ ಸಂಪೂರ್ಣ ಫಲ ಫಲಾನುಭವಿಗಳಿಗೆ ಸಿಗಬೇಕು ಎನ್ನುವ ಕಾರಣಕ್ಕೆ ಸರ್ಕಾರದ ನೆರವು ಫಲಾನುಭವಿಯ ಬ್ಯಾಂಕ್ ಅಕೌಂಟಿಗೆ ನೇರ ಜಮಾ ಮಾಡುವ ವಿಶಿಷ್ಟ ಕಾರ್ಯಕ್ರಮವನ್ನು ಮೋದಿ ಸರ್ಕಾರ ಮೊದಲ ಬಾರಿಗೆ ಜಾರಿಗೆ ತಂದಿತು ಎಂದು ಸಂಸದರು ಶ್ಲಾಘಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ಮೋದಿಯವರ 8 ವರ್ಷದ ಸಾಧನೆ ದೇಶದ ಜನರಿಗೆ ಮಾತ್ರವಲ್ಲದೆ, ದೇಶದ ಘನತೆ, ಗೌರತವವನ್ನು ಜಗತ್ತಿನ ಮಟ್ಟದಲ್ಲಿ ಹೆಚ್ಚು ಮಾಡಿದೆ. ಬಡವರು, ಮಹಿಳೆಯರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ-ಪಂಗಡದವರು ಹೀಗೆ ಎಲ್ಲಾ ವರ್ಗದ ಜನರೂ ಸ್ವಾವಲಂಭಿಯಾಗಿ, ಸ್ವಾಭಿಮಾನದಿಂದ ಬಾಳುವಂತಹ ಹತ್ತು ಹಲವಾರು ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ದೇಶದ ಜನರ ಮತ್ತಷ್ಟು ಏಳಿಗೆಗೆ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಭ್ರಷ್ಟಾಚಾರಮುಕ್ತ, ಪಾರದರ್ಶಕ ಆಡಳಿತ ನೀಡಬೇಕು, ಫಲಾನುಭವಿಗಳ ಹಣ ಪೋಲಾಗದೆ, ಮಧ್ಯವರ್ತಿಗಳ ಪಾಲಾಗದಂತೆ ಸಂಪೂರ್ಣ ಅವರಿಗೇ ತಲುಪಬೇಕು ಎಂಬ ಆಶಯದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಯೋಜನೆ ತಂದರು. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 11 ಕೋಟಿ 30 ಲಕ್ಷ ಜನರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ. ಬಡವರ ಆರೋಗ್ಯ ಕಾಪಾಡುವ ಆಯುಷ್‍ಮಾನ್ ಭಾರತ್ ಯೋಜನೆಯಲ್ಲಿ 18 ಕೋಟಿ ಬಡವರು ಪ್ರಯೋಜನ ಪಡೆದಿದ್ದಾರೆ. ಜನಧನ್ ಯೋಜನೆಯಿಂದ 45 ಕೋಟಿ ಜನರಿಗೆ ಅನುಕೂಲವಾಗಿದೆ. ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕು, ದೇಶದ ಜನರಿಗೆ ಇನ್ನಷ್ಟು ಅನುಕೂಲಗಳಾಗಬೇಕು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಪರಿಚಯಿಸಲು, ಅರ್ಹರಿಗೆ ಅದರ ಫಲ ದೊರಕಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮೇಯರ್ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ಚಂದ್ರಶೇಖರ್ ವಿನಂತಿಸಿದರು.
ಈ ವೇಳೆ ಫಲಾನುಭವಿಗಳಿಗೆ ಇ-ಶ್ರಮ್ ಕಾರ್ಡ್‍ಗಳನ್ನು ವಿತರಿಸಲಾಯಿತು.
32ನೇ ವಾರ್ಡ್ ಬಿಜೆಪಿ ಅಧ್ಯಕ್ಷ ಹೆಚ್..ರವೀಶ್, ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಎಂ.ಡಿ.ನರಸಿಂಹಮೂರ್ತಿ, ಜಿಲ್ಲಾ ಬಿಜೆಪಿ ಓಬಿಸಿ ಅಧ್ಯಕ್ಷ ಶಂಕರಪ್ಪ, ಮುಖಂಡರಾದ ಡೆಲ್ಟಾ ರವಿ, ತಾರಾಮಣಿ, ಉಮಾ ಮಹೇಶ್, ಚಂದ್ರಕಲಾ, ಮುನಿಬಸವರಾಜು ಮತ್ತಿತರರು ಭಾಗವಹಿಸಿದ್ದರು.

(Visited 1 times, 1 visits today)