ತುಮಕೂರು:
ಕಣ್ವ ಫ್ಯಾಷನ್ ಲಿಮಿಟೆಡ್ ಸಂಸ್ಥೆಯೂ ಕಾರ್ಮಿಕರಿಗೆ ನೀಡಬೇಕಾದ ಸಂಬಳ ಮತ್ತು ಕಾರ್ಮಿಕರ ಭವಿಷ್ಯ ನಿಧಿಯನ್ನು ನೀಡದೇ ಹೆಣಗಾಡಿಸುತ್ತಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಾರ್ಮಿಕರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು, ಕೊರಟಗೆರೆ ತಾಲ್ಲೂಕು ಕೊಂಗೇನಹಳ್ಳಿಯಲ್ಲಿ ಪ್ರಾರಂಭಿಸಿದ್ದ ಸಂಸ್ಥೆಯೂ 300ಕ್ಕೂ ಹೆಚ್ಚು ಕಾರ್ಮಿಕರಿಗೆ ಸಂಬಳ, ಭವಿಷ್ಯ ನಿಧಿ, ಉಪಧನ, ಕ್ಲೋಜರ್ ಪರಿಹಾರಿ ಯಾವುದನ್ನು ನೀಡದೆ ಏಕಾಏಕಿ ಕಾರ್ಖಾನೆಯನ್ನು ಮುಚ್ಚಿದ್ದು, ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು, ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿ ಕಾರ್ಖಾನೆ ಮಾಲೀಕರು ಏಕಾಏಕಿ ಸಂಸ್ಥೆಯನ್ನು ಮುಚ್ಚಿದ್ದು, ಗ್ರಾಮೀಣ ಪ್ರದೇಶದಿಂದ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದ್ದು, ಇವರನ್ನು ನಂಬಿಕೊಂಡಿದ್ದ ಕುಟುಂಬಗಳು ಇಂದು ಉದ್ಯೋಗವಿಲ್ಲದಂತ ಸ್ಥಿತಿಯಲ್ಲಿವೆ ಎಂದರು.
ತಿಂಗಳ ಸಂಬಳವನ್ನೇ ನೆಚ್ಚಿ ಬದುಕುತಿದ್ದ ಕಾರ್ಮಿಕರ ಕುಟುಂಬಗಳಿಗೆ ಕಣ್ವ ಫ್ಯಾಷನ್ ಲಿಮಿಟೆಡ್ ಸಂಸ್ಥೆಯೂ ಸಂಬಳ, ಭವಿಷ್ಯ ನಿಧಿ, ಉಪಧನ, ಕ್ಲೋಜರ್ ಪರಿಹಾರಿ ಯಾವುದನ್ನು ನೀಡದೇ ಇರುವುದನ್ನು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕಾರ್ಮಿಕ ಭವಿಷ್ಯ ನಿಧಿ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು, ಕಾರ್ಮಿಕರು ಕಷ್ಟದಿಂದ ಗಳಿಸಿರುವ ಭವಿಷ್ಯ ನಿಧಿಯನ್ನು ಪಡೆಯಲು ಆಗಿರುವ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಕಾರಣದಿಂದ ಕಣ್ವ ಫ್ಯಾಷನ್ ಲಿಮಿಟೆಡ್ ವಿರುದ್ಧ ಕಾರ್ಮಿಕರು ನಡೆಸುತ್ತಿದ್ದ ಹೋರಾಟವನ್ನು ಮೊಟಕುಗೊಳಿಸುವಂತಹ ಸ್ಥಿತಿ ನಿರ್ಮಾಣವಾಗಿತ್ತು, ಇದನ್ನೆ ಬಂಡವಾಳ ಮಾಡಿಕೊಂಡಿರುವ ಸಂಸ್ಥೆ, ನಷ್ಟ ಎದುರಿಸುತ್ತಿದ್ದರಿಂದ ಸಂಸ್ಥೆ ಮುಚ್ಚಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದು, ಕಾರ್ಮಿಕರಿಗೆ ನೀಡಬೇಕಾದ 3.5 ಕೋಟಿ ಅನ್ನು ಕೊಡಿಸಲು ಜಿಲ್ಲಾಡಳಿತ ಜವಾಬ್ದಾರಿ ಹೊರಬೇಕೆಂದರು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜು.10ರ ನಂತರ ಕಣ್ವ ಫ್ಯಾಷನ್ ಲಿಮಿಟೆಡ್ ಅಧಿಕಾರಿಗಳು, ಕಾರ್ಮಿಕ ಮತ್ತು ಭವಿಷ್ಯ ನಿಧಿ ಇಲಾಖೆ ಅಧಿಕಾರಿಗಳೊಂದಿಗೆ ಕಾರ್ಮಿಕ ಮುಖಂಡರ ಸಭೆ ಏರ್ಪಡಿಸಿ ಸಮಸ್ಯೆ ಬಗೆಹರಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಸಿಐಟಿಯು ತಾಲ್ಲೂಕು ಅಧ್ಯಕ್ಷ ಷಣ್ಮುಗಪ್ಪ, ಖಜಾಂಚಿ ಲೋಕೇಶ್, ಮುಖಂಡರಾದ ಹೆಚ್.ಗೋಪಾಲ್, ತಿಮ್ಮಪ್ಪ, ರತ್ನಮ್ಮ, ಶಿವಮ್ಮ, ಮಹಾಲಕ್ಷ್ಮೀ, ತ್ರಿವೇಣಿ, ಮೀನಾಕ್ಷಿ, ಧನಲಕ್ಷ್ಮೀ ಸೇರಿದಂತೆ ಇತರರು ಉಪಸ್ಥಿತರಿದ್ದರು.