ತುಮಕೂರು:


ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕುಂಚಟಿಗ ಒಕ್ಕಲಿಗ ಸಮುದಾಯವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಓಬಿಸಿ ಜಾತಿಗಳ ಪಟ್ಟಿಗೆ ಸೇರಿಸುವಂತೆ ಶೀಘ್ರದಲ್ಲಿಯೇ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕುಂಚಟಿಗ ಒಕ್ಕಲಿಗ ಸಮುದಾಯ ಕೇಂದ್ರ ಮತ್ತು ರಾಜ್ಯದ ಒಬಿಸಿ ಜಾತಿಗಳ ಪಟ್ಟಿಯಲ್ಲಿತ್ತು. ಆದರೆ 2002ರಲ್ಲಿ ಅಂದಿನ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಕೆಲ ತಪ್ಪು ತಿಳುವಳಿಕೆಯಿಂದ, ಕೇಂದ್ರ ಓಬಿಸಿ ಪಟ್ಟಿಯಿಂದ ಕೈಬಿಟ್ಟ ಪರಿಣಾಮ ಕೇಂದ್ರ ಸರಕಾರದ ಯಾವುದೇ ಹುದ್ದೆಗಳಲ್ಲಿ ನಮ್ಮ ಮಕ್ಕಳಿಗೆ ಮೀಸಲಾತಿ ಇಲ್ಲದಂತಾಗಿದೆ.ಇದರಿಂದ ಸಮುದಾಯಕ್ಕೆ ಶೈಕ್ಷಣಿಕವಾಗಿ ಬಹಳ ನಷ್ಟ ಉಂಟಾಗುತ್ತಿದೆ. ನಮ್ಮ ಮಕ್ಕಳು ಯುಪಿಎಸ್,ರೈಲ್ವೆ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸಾಮಾನ್ಯವರ್ಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ, ಉತ್ತಮ ಅಂಕ ಪಡೆದರೂ ಐಎಎಸ್ ನಂತಹ ಹುದ್ದೆಗಳು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 25ರ ರಾಜ್ಯಸಮಾವೇಶದ ತೀರ್ಮಾನದಂತೆ ಹಾಗೂ ಕೇಂದ್ರದ ಸಚಿವರುಗಳ ಭರವಸೆಯಂತೆ ಕೂಡಲೇ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.
ಕಳೆದ 2002ರಿಂದಲೂ ಕುಂಚಟಿಗ ಒಕ್ಕಲಿಗರನ್ನು ಕೇಂದ್ರ ಒಬಿಸಿ ಜಾತಿ ಪಟ್ಟಿಯಿಂದ ಕೈಬಿಟ್ಟುವುದನ್ನು ಖಂಡಿಸಿ, ಮರುಸೇರ್ಪಡೆಗೆ ಒತ್ತಾಯಿಸಿ ಕುಂಚಿಟಗ ಸಮುದಾಯ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿ ಮಾಡುತ್ತಲೇ ಬಂದ ಪರಿಣಾಮ ದೇವರಾಜ ಅರಸು ಅಧ್ಯಯನ ಪೀಠದ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಮೂಲಕ ಕುಲಶಾಸ್ತ್ರೀಯ ಅಧ್ಯಯನ ನಡೆಸಿದ್ದು, ಸದರಿ ವರದಿಯನ್ನು ಸಲ್ಲಿಸಿದ ನಂತರ 2019ರ ಜುಲೈ 25 ರಂದು ರಾಜ್ಯ ಸರಕಾರ ಕೇಂದ್ರದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕುಂಚಿಟಿಗರನ್ನು ಕೇಂದ್ರ ಓಬಿಸಿ ಜಾತಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದೆ.ಸದರಿ ವರದಿಯ ಆಧಾರದಲ್ಲಿ ಎನ್.ಸಿ.ಬಿ.ಸಿ 2019ರ ನವೆಂಬರ್ 18 ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮ ಆಗಿಲ್ಲ.ಈ ಹಿನ್ನೇಲೆಯಲ್ಲಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಕೇಂದ್ರದ ಮಾಜಿ ಮಂತ್ರಿಗಳಾದ ಸದಾನಂದಗೌಡ ಮತ್ತು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ ಅವರುಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
ಕರ್ನಾಟಕದಲ್ಲಿ ಸೋಮವಾರ ಓರ್ವ ಐಎಎಸ್ ಮತ್ತು ಓರ್ವ ಐಪಿಎಸ್ ಅಧಿಕಾರಿಯನ್ನು ಭ್ರಷ್ಟಾಚಾರದ ಆರೋಪದಲ್ಲಿ ಸಿಐಡಿ ಮತ್ತು ಎಸಿಬಿ ಬಂಧಿಸಿವೆ.ಇದಕ್ಕಾಗಿ ಎರಡು ತನಿಖಾ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ,ಇದು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದಕ್ಕೆ ಸಾಕ್ಷಿಯಾಗಿದೆ.ಇದನ್ನು ಮಟ್ಟ ಹಾಕುವುದು ಆಡಳಿತಶಾಹಿ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ.ಈ ನಿಟ್ಟಿನಲ್ಲಿ ಚುನಾವಣೆ ಪ್ರಕ್ರಿಯೆಗಳಿಗೆ ಸುಧಾರಣೆ ತರಬೇಕೆಂಬುದು ನಮ್ಮ ಒತ್ತಾಯವಾಗಿದೆ.ಅಭ್ಯರ್ಥಿಗಳ ಆಸ್ತಿ ಘೋಷಣೆ ಸಂದರ್ಭದಲ್ಲಿಯೇ ಸೂಕ್ತ ಕ್ರಮ ಕೈಗೊಂಡರೆ ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುಬಹುದು ಎಂದರು. ಎಸಿಬಿ ವಿಚಾರಣೆ ವೇಳೆ ಖಾರವಾಗಿ ಪ್ರತಿಕ್ರಿಯಿಸಿದರು ಎಂಬ ಕಾರಣಕ್ಕೆ ನ್ಯಾಯಾಧೀಶರೊಬ್ಬರನ್ನು ವರ್ಗಾವಣೆ ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.ಇದನ್ನು ಮಟ್ಟ ಹಾಕಬೇಕಿದೆ.ಅಲ್ಲದೆ ಪ್ರಜಾಪ್ರಭುತ್ವದ ಕ್ಯಾನ್ಸರ್ ಆಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂತಹ ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಬೇಕು. ಅವರ ಬೆಂಬಲಕ್ಕೆ ಜನಸಮಾನ್ಯರು ನಿಲ್ಲಬೇಕೆಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ನುಡಿದರು.
ಸುದ್ದಿಗೋಷ್ಠಿಯಲ್ಲಿ ಕುಂಚಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆರ್.ಕಾಮರಾಜು, ಉಪಾಧ್ಯಕ್ಷ ವೈ.ಆರ್.ವೇಣುಗೋಪಾಲ್,ಕಾರ್ಯದರ್ಶಿ ಎಂ.ರಾಜಕುಮಾರ್,ಜಂಟಿ ಕಾರ್ಯದರ್ಶಿ ಕೆ.ಮಂಜುನಾಥ್, ಖಜಾಂಚಿ ಎಸ್.ಉದಯಕುಮಾರ್ ಸೇರಿದಂತೆ ನಿರ್ದೇಶಕರುಗಳು ಉಪಸ್ಥಿತರಿದ್ದರು.

(Visited 2 times, 1 visits today)