ತುಮಕೂರು:
ತುಮಕೂರು ವಿಶ್ವ ವಿದ್ಯಾಲಯದ ಘಟಿಕೋತ್ಸವ ದಲ್ಲಿ ಭಾಗವಹಿಸಿದ ನಂತರ ರಾಜ್ಯ ಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ್ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು, ಸಮಾಲೋಚನೆ ನಡೆಸಿದರು.
ರಾಜ್ಯಪಾಲರು ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಿದ್ದಂತೆ ಸಾಲಾಗಿ ಕುಳಿತಿದ್ದ ಮಕ್ಕಳು ಚಪ್ಪಾಳೆ ತಟ್ಟುವ ಮೂಲಕ ರಾಜ್ಯಪಾಲರಿಗೆ ಸ್ವಾಗತ ಕೋರಿದರು.
ನನ್ನ ಪ್ರೀತಿಯ ಮಕ್ಕಳೇ ತಮ್ಮೆಲರಿಗೂ ಶುಭಾಶಯಗಳು ಎಂದು ರಾಜ್ಯಪಾಲರು ಕನ್ನಡದಲ್ಲಿ ಮಾತ ನಾಡುತ್ತಿದ್ದಂತೆ ವಿದ್ಯಾರ್ಥಿ ಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ನಂತರ ಹಿಂದಿಯಲ್ಲಿ ಮಾತುಗಳನ್ನು ಮುಂದುವರೆಸಿದ ರಾಜ್ಯಪಾಲರು, ಮಕ್ಕಳೇ ನೀವುಗಳೇ ನಮ್ಮ ದೇಶದ ಭವಿಷ್ಯ. ಭಾರತೀಯ ಸಂಸ್ಕೃತಿ, ಧರ್ಮ, ಶಿಸ್ತು ಅರಿತು ದೇಶದ ನಿರ್ಮಾಣದಲ್ಲಿ ಪಾಲುದಾರರಾಗಿ. ವಸುದೈವ ಕುಟುಂಬಕಂ ಎಂಬ ಭಾವನೆಯನ್ನು ಅರಿತು ನಾವೆಲ್ಲರೂ ಒಂದೇ ಎಂದು ಮುನ್ನುಗ್ಗಿ, ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದಲ್ಲಿ ಮಠಾಧೀಶರಾದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.